ಲವ್ ಬ್ರೇಕಪ್ – ಯುವತಿಯಿಂದ ದೂರು, ಯುವಕ ಅರೆಸ್ಟ್

ಭುವನೇಶ್ವರ: ಯುವಕನೊಬ್ಬ ತನ್ನ ಪ್ರಿಯತಮೆಯ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

ಒಡಿಶಾದ ಜೈಪುರ್ ನಲ್ಲಿ ಈ ಘಟನೆ ನಡೆದಿದ್ದು, ಕುಕಾಖಿಯ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ. ರಾಮಚಂದ್ರ ಬಾರಿಕ್ ಬಂಧಿತ ಆರೋಪಿ. ಸಂತ್ರಸ್ತೆ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಆರೋಪಿಯನ್ನು ಕಟಕ್ ನ ಮಂಗೂಲಿಯಲ್ಲಿದ್ದ ಮನೆಯಿಂದ ಬಂಧಿಸಲಾಗಿದೆ.

ಭುವನೇಶ್ವರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಇಬ್ಬರ ನಡುವೆ ಪರಿಚಯವಾಗಿತ್ತು. ಪರಿಚಯವು ಪ್ರೀತಿಗೆ ತಿರುಗಿತ್ತು. ಆದರೆ ಆರೋಪಿ ರಾಮಚಂದ್ರ, ಆಕೆಯ ಸ್ನೇಹಿತರ ಜೊತೆ ಸೇರಿ ಸಂತ್ರಸ್ತೆಯ ಕೆಲ ಅಸಭ್ಯ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾನೆ. ಕೆಲವು ದಿನಗಳ ನಂತರ ಇವರ ಮಧ್ಯೆ ಜಗಳವಾಗಿ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಈ ಕಾರಣದಿಂದ ಕೋಪಗೊಂಡು ಆತ ತೆಗೆದಿದ್ದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ ಅಂತ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸಂತ್ರಸ್ತೆಗೆ ಈ ಬಗ್ಗೆ ತಿಳಿದ ತಕ್ಷಣ ಕುಕಾಖಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಾನೇ ಅಪ್ಲೋಡ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಆರೋಪಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

Comments

Leave a Reply

Your email address will not be published. Required fields are marked *