ಕಾಲೇಜ್ ಸೆಕ್ಯೂರಿಟಿಯಾಗಿ ಸೇರಿ 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನಗೈದ ಟೆಕ್ಕಿ ಅರೆಸ್ಟ್

ಬೆಂಗಳೂರು: ಎಂಜಿನಿಯರಿಂಗ್ ಓದಿ ಸೆಕ್ಯೂರಿಟಿ ಕೆಲಸ ಮಾಡಿ ಕಂಪ್ಯೂಟರ್ ಸೇರಿದಂತೆ 35 ಲಕ್ಷಕ್ಕೂ ಅಧಿಕ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಓಡಿಶಾ ಮೂಲದ ರಾಜಪಾತ್ರ ಬಂಧಿತ ಆರೋಪಿ. ಬಾಗಲೂರು ಪೊಲೀಸರು ಈತನನನ್ನು ಬಂಧಿಸಿದ್ದು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಓದುತ್ತಿರುವಾಗಲೇ ಕಳ್ಳತನ:
ಒಡಿಶಾದ ಪ್ರತಿಷ್ಠಿತ ಬಿಜು ಲನಿರ್ಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಈತ ಓದಿನ ಸಮಯದಲ್ಲೇ ಕಳ್ಳತನಕ್ಕೆ ಇಳಿದಿದ್ದ. ಕಳ್ಳತನದ ಕೆಲಸ ಮಾಡುವುದು ಅಭ್ಯಾಸವಾಗಿದ್ದ ಕಾರಣ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ.

ಎಂಜಿನಿಯರಿಂಗ್ ಮುಗಿಸುತ್ತಲೇ ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳು, ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಕಳವು ಮಾಡಿ, ಕೆಲವನ್ನು ಹ್ಯಾಕ್ ಮಾಡುವುದು ಸೇರಿದಂತೆ ಕೆಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ.

ಸೆಕ್ಯೂರಿಟಿ ಉದ್ಯೋಗಿ:
ಜೈಲಿನಿಂದ ಬಿಡುಗಡೆಯಾದ ರಾಜಪಾತ್ರ ನೇರವಾಗಿ ಬಂದಿದ್ದು ಬೆಂಗಳೂರಿಗೆ. ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ಆತ ಆ ಕಾಲೇಜುಗಳಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ.

ಹಂತ ಹಂತವಾಗಿ ಸೆಕ್ಯೂರಿಟಿ ಕೆಲಸದಿಂದ ಕಚೇರಿ/ಲ್ಯಾಬ್ ಒಳಗೆ ಹೋಗುತ್ತಿದ್ದ ರಾಜಪಾತ್ರ ಕಂಪ್ಯೂಟರ್ ಬಿಡಿ ಭಾಗಗಳನ್ನು, ಲ್ಯಾಪ್ ಟಾಪ್‍ಗಳು, ಕಂಪ್ಯೂಟರ್‍ಗಳನ್ನು ಕಳವು ಮಾಡಿ ಅವುಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುತ್ತಿದ್ದ. ಇನ್ನು ಕೆಲವನ್ನು ಒಡಿಶಾದಲ್ಲಿ ಮಾರಾಟ ಮಾಡುತ್ತಿದ್ದ. ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ: ಬೆಲ್ಲದ್

ಲಿಂಕ್ಡ್ ಇನ್ ನಲ್ಲಿ ರಿವರ್ಕ್ ಎಂಡೆವರ್ ಪ್ರೈವೆಟ್ ಲಿಮಿಟೆಡ್ ಹೆಸರಿನ್ನು ಖಾತೆ ತೆರೆದಿದ್ದ. ಅಷ್ಟೇ ಅಲ್ಲದೇ ಈ ಕಂಪನಿಯ ಡೈರೆಕ್ಟರ್ ನಾನೇ ಎಂದು ಬಿಂಬಿಸಿಕೊಂಡಿದ್ದ. ಕಡಿಮೆ ಬೆಲೆಗೆ ಕಂಪ್ಯೂಟರ್, ಲ್ಯಾಪ್‍ಟಾಪ್, ಪ್ರೊಸೆಸರ್, ಹಾರ್ಡ್ ಡಿಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದ.

ಎಂಜಿನಿಯರಿಂಗ್ ಕಾಲೇಜಿನ ಒಳಗಡೆ ಇದ್ದವರಿಂದಲೇ ಕೃತ್ಯ ನಡೆದಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್

ಒಡಿಶಾದಲ್ಲಿ ಈ ಹಿಂದೆ ಏನೆಲ್ಲಾ ಕೆಲಸ ಮಾಡಿದ್ದ? ಯಾವೆಲ್ಲಾ ಕೇಸ್‍ಗಳಲ್ಲಿ ಭಾಗಿಯಾಗಿದ್ದ ಎಂಬುದರ ಬಗ್ಗೆ ಈಗ ಪೊಲೀಸರ ತನಿಖೆ ಸಾಗುತ್ತಿದೆ.

Comments

Leave a Reply

Your email address will not be published. Required fields are marked *