ಶಿವರಾತ್ರಿ ವಿಶೇಷ – ಪೆನ್ಸಿಲ್ ನಿಬ್ಬಿನಲ್ಲಿ ಮೂಡಿದ ಪುಟಾಣಿ ಶಿವಲಿಂಗ

– ಕಲ್ಲಿನಲ್ಲಿ ಅರಳಿದ 0.5 ಇಂಚಿನ ಮಹಾದೇವ

ಭುವನೇಶ್ವರ: ಶಿವರಾತ್ರಿ ಹಬ್ಬದ ಪ್ರಯುಕ್ತ ಒರಿಸ್ಸಾದ ಹೆಸರಾಂತ ಮಿನಿಯೇಚರ್ ಆರ್ಟಿಸ್ಟ್ ಎಲ್. ಈಶ್ವರ್ ರಾವ್ ಅವರು ಪೆನ್ಸಿಲ್ ನಿಬ್ಬಿನಲ್ಲಿ ಹಾಗೂ ಕಲ್ಲಿನಲ್ಲಿ 0.5 ಇಂಚಿನ ಶಿವಲಿಂಗವನ್ನು ಕೆತ್ತನೆ ಮಾಡಿ ಭಕ್ತಿ ಮೆರೆದಿದ್ದಾರೆ.

ಈಶ್ವರ್ ರಾವ್ ಅವರು ಒರಿಸ್ಸಾದ ಖುರ್ದಾ ಜಿಲ್ಲೆಯ ಜಟ್ನಿ ಗ್ರಾಮದ ನಿವಾಸಿಯಾಗಿದ್ದು, ಮಿನಿಯೇಚರ್ ಆರ್ಟಿಸ್ಟ್ ಆಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದ, ಶಿವರಾತ್ರಿ ಪ್ರಯುಕ್ತ ಈ ಪುಟಾಣಿ ಶಿವಲಿಂಗವನ್ನು ಮಾಡಿದ್ದೇನೆ. ಸಣ್ಣ ಬಾಟಲಿನಲ್ಲಿ ಮೃದು ಕಲ್ಲಿನಿಂದ 0.5 ಇಂಚಿನ ಶಿವಲಿಂಗವನ್ನು ತಯಾರಿಸಿದ್ದೇನೆ. ಹಾಗೆಯೇ ಪೆನ್ಸಿಲ್ ನಿಬ್ಬಿನಲ್ಲಿ ಕೂಡ 0.5 ಇಂಚಿನ ಶಿವಲಿಂಗ ಮಾಡಿದ್ದೇನೆ ಎಂದರು.

ಸಣ್ಣ ಬಾಟಲಿಯೊಳಗೆ ಚಿಕ್ಕ ಕಲ್ಲಿನ ಶಿವಲಿಂಗವನ್ನು ತಯಾರಿಸಲು 2 ದಿನ ಸಮಯ ತಗುಲಿತು, ಆದರೆ ಪೆನ್ಸಿಲ್ ನಿಬ್ಬಿನಲ್ಲಿ ಮಾಡಿರುವ ಶಿವಲಿಂಗವನ್ನು ಒಂದು ದಿನದಲ್ಲಿ ತಯಾರಿಸಿದೆ. ಅದರಲ್ಲೂ ಮೃದು ಕಲ್ಲಿನ ಶಿವಲಿಂಗವನ್ನು ಸಣ್ಣ ಬಾಟಲಿಯೊಳಗೆ ಇರಿಸಲು ಸುಮಾರು 4 ಗಂಟೆ ಸಮಯ ಬೇಕಾಯ್ತು. ಇದು ತುಂಬ ಕಷ್ಟಕರ ಕೆಲಸವಾಗಿತ್ತು ಎಂದು ಕಲಾವಿದ ತಿಳಿಸಿದರು.

ಕಲಾವಿದನ ಕೈಚಳಕದಲ್ಲಿ ಮೂಡಿದ ಪುಟಾಣಿ ಶಿವಲಿಂಗಗಳು ಭಕ್ತರ ಮನ ಗೆದ್ದಿದ್ದು, ಕಲಾವಿದನ ಪ್ರತಿಭೆಗೆ ಸಲಾಂ ಎಂದಿದ್ದಾರೆ. ಈ ಹಿಂದೆ ಕೂಡ ಕಲಾವಿದ ಈಶ್ವರ್ ರಾವ್ ತಮ್ಮ ಕಲೆಯ ಮೂಲಕ ಎಲ್ಲರ ಮನಗೆದ್ದಿದ್ದರು. ಕಳೆದ ವರ್ಷ ಪೆನ್ಸಿಲ್ ಟಿಪ್ ಮೇಲೆ ಹುಣಿಸೆ ಬೀಜದಲ್ಲಿ ಪುರುಷರ ಹಾಕಿ ವಲ್ರ್ಡ್ ಕಪ್ ಅನ್ನು ಕೆತ್ತಿ ಭಾರತ ತಂಡಕ್ಕೆ ಗೌರವ ಸಲ್ಲಿಸಿದ್ದರು. ಅಲ್ಲದೇ ಕ್ರಿಸ್ಮಸ್ ಹಬ್ಬದಂದು ಚರ್ಚ್‍ವೊಂದನ್ನು ಬಾಟಲಿಯೊಳಗೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು.

ಹಾಗೆಯೇ 4ನೇ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರುವರೆ ಇಂಚಿನ ಪ್ರತಿಮೆಯನ್ನು ಕೆತ್ತಿದ್ದರು. ಬಾಟಲಿಯೊಳಗೆ ಸೋಪಿನಲ್ಲಿ ಈ ಕಲಾಕೃತಿಯನ್ನು ಈಶ್ವರ್ ರಾವ್ ಕೆತ್ತಿದ್ದರು.

Comments

Leave a Reply

Your email address will not be published. Required fields are marked *