ಕನ್ನಡ ರಾಜ್ಯೋತ್ಸವಕ್ಕೆ ‘ಒಡೆಯ’ನ ಗಿಫ್ಟ್- ಟೀಸರ್ ರಿಲೀಸ್

ಬೆಂಗಳೂರು: ಇಂದು ಸಮಸ್ತ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದಾರೆ. ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ‘ಒಡೆಯ’ ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ದೀಪಾವಳಿ ಹಬ್ಬಕ್ಕೆ ಸಿಹಿ ಸುದ್ದಿ ಕೊಟ್ಟಿದ್ದರು. ಅವರು ಹೇಳಿದಂತೆ ಕನ್ನಡಿಗರಿಗೆ ಆ್ಯಕ್ಷನ್ ‘ಒಡೆಯ’ ನ ದರ್ಶನ ಮಾಡಿಸಿದ್ದಾರೆ.

ದರ್ಶನ್ ಅಭಿನಯದ ‘ಒಡೆಯ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ವಿಡಿಯೋ ಕೇವಲ 1 ನಿಮಿಷ 4 ಸೆಕೆಂಡ್‍ಗಳು ಮಾತ್ರ ಇದೆ. “ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರನೇ ಆಸೆ ಪಟ್ಟು ನನ್ನನ್ನು ಇಲ್ಲಿಗೆ ಕರೆಸಿಕೊಂಡಿದೆ. ಇನ್ಮುಂದೆ ಅಧಿಕಾರನೂ ನಂದೆನೇ, ಆಜ್ಞೆಯೂ ನಂದೆನೇ” ಎಂಬ ಮಾಸ್ ಡೈಲಾಗ್ ಮೂಲಕ ಟೀಸರ್ ಶುರುವಾಗಿದೆ.

ಟೀಸರ್ ಪೂರ್ತಿ ದರ್ಶನ್ ಅವರ ಆ್ಯಕ್ಷನ್ ಝಲಕನ್ನು ನೋಡಬಹುದು. ಈ ಮೂಲಕ ಆ್ಯಕ್ಷನ್ ಪ್ರಿಯರಿಗೆ ದರ್ಶನ್ ಲಾಂಗ್ ಹಿಡಿದು ದರ್ಶನ ಕೊಟ್ಟಿದ್ದಾರೆ. ಈಗಾಗಲೇ ಯೂಟ್ಯೂಬ್‍ನಲ್ಲಿ 4 ಲಕ್ಷಕ್ಕೂ ಅಧಿಕ ವ್ಯೂವ್ಸ್ ಕಂಡಿದೆ. 67 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

‘ಒಡೆಯ’ ಸಿನಿಮಾದಲ್ಲಿ ದರ್ಶನ್ ಗಜೇಂದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಎಂ.ಡಿ. ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಎನ್.ಸಂದೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಅಣ್ಣ-ತಮ್ಮಂದಿರ ಸಿನಿಮಾವಾಗಿದೆ.

ದರ್ಶನ್ ಅವರು ಕೂಡ ಟ್ವೀಟ್ ಮಾಡುವ ಮೂಲಕ ಜನರಿಗೆ ಕನ್ನಡ ರಾಜ್ಯೋತ್ವವಕ್ಕೆ ಶುಭಾ ಕೋರಿದ್ದಾರೆ. “ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ” ಎಂದು ಬರೆದು ವಿಶ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *