ನ್ಯಾಯ ಯೋಜನೆ – ಅಲಹಾಬಾದ್ ಹೈಕೋರ್ಟಿನಿಂದ ಕಾಂಗ್ರೆಸ್‍ಗೆ ನೋಟಿಸ್

ಲಕ್ನೋ: ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿರುವ ನ್ಯಾಯ ಯೋಜನೆಯ ಸಂಬಂಧ ಸ್ಪಷ್ಟನೆ ತಿಳಿಸುವಂತೆ ಅಲಹಾಬಾದ್ ಹೈ ಕೋರ್ಟ್ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರೊಬ್ಬರು ನ್ಯಾಯ ಯೋಜನೆ ಪ್ರಕಟಿಸುವ ಮೂಲಕ ಕಾಂಗ್ರೆಸ್ ಪ್ರಜಾಪ್ರತಿನಿಧಿ ಕಾಯ್ದೆ 1951 ಮತ್ತು ಚುನಾವಣಾ ನೀತಿ ಸಹಿಂತೆಯ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಸುಧೀರ್ ಅಗರ್ವಾಲ್ ಹಾಗೂ ರಾಜೇಂದ್ರ ಕುಮಾರ್ ಅವರಿದ್ದ ದ್ವಿ ಸದಸ್ಯ ಪೀಠ ಕಾಂಗ್ರೆಸ್ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾರಿ ಸ್ಪಷ್ಟನೆ ಕೇಳಿದೆ. ಇದನ್ನು ಓದಿ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ – ಕರ್ಜ್ ಮಾಫಿ, ನ್ಯಾಯ ಯೋಜನೆಗಳ ಘೋಷಣೆ

ಅರ್ಜಿದಾರರ ಆರೋಪ ಏನು?
ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 ಪ್ರಕಾರ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವ ಯಾವುದೇ ಭರವಸೆಗಳನ್ನು ನಾಯಕರು ನೀಡಬಾರದು. ಉಡುಗೊರೆಯನ್ನು ನೀಡಿ ಮತಗಳನ್ನು ಪಡೆಯುವಂತಿಲ್ಲ. ನೇರವಾಗಿ ಅಥವಾ ಪರೋಕ್ಷವಾಗಿ ಚುನಾವಣಾ ಏಜೆಂಟ್ ಮತದಾರರಿಗೆ ಆಮಿಷಗಳನ್ನು ಒಡ್ಡುವಂತಿಲ್ಲ. ಚುನಾವಣೆಗಾಗಿ ಹಣವನ್ನು ಹಂಚುವಂತಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದ ವೇಳೆ ಜನರ ಬಳಿ ತೆರಳಿ ವಾರ್ಷಿಕ 72 ಸಾವಿರ ರೂ. ನೀಡುತ್ತೇವೆ ಎಂದು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಓದಿ: ರಾಹುಲ್ ಗಾಂಧಿ ‘ನ್ಯಾಯ’ ಯೋಜನೆ ಫೋಟೋ – ಕೆಟ್ಟ ಫೋಟೋಶಾಪ್ ಮಾಡಿದಕ್ಕೆ ಫುಲ್ ಟ್ರೋಲ್

ಈ ರೀತಿ ಪ್ರಚಾರ ನಡೆಸುವುದು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆ. ಚುನಾವಣಾ ಪ್ರಣಾಳಿಕೆಗಳು ಭ್ರಷ್ಟಾಚಾರವನ್ನು ತೊಲಗಿಸುತ್ತೇವೆ ಎಂದು ಹೇಳಬೇಕೇ ವಿನಾ: ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಬಾರದು. ಪ್ರಜಾಪ್ರಭುತ್ವದಲ್ಲಿ ನ್ಯಾಯೋಚಿತ ಚುನಾವಣೆ ನಡೆಯಬೇಕು. ಆದರೆ ಕಾಂಗ್ರೆಸ್ ನ್ಯಾಯಾ ಯೋಜನೆಯ ಮೂಲಕ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತದೆ. ಹೀಗಾಗಿ ಕಡು ಬಡವರ ಖಾತೆಗೆ ವಾರ್ಷಿಕ 72 ಸಾವಿರ ರೂ. ನೀಡುವುದಾಗಿ ಘೋಷಿಸಿದ ನ್ಯಾಯ ಯೋಜನೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಿಂದ ತೆಗೆದು ಹಾಕುವಂತೆ ಆದೇಶಿಸಬೇಕು. ಚುನಾವಣಾ ಸಮಯದಲ್ಲಿ ಯಾವುದೇ ಪಕ್ಷಗಳು ಈ ರೀತಿ ಘೋಷಣೆಗಳನ್ನು ಪ್ರಕಟಿಸದಂತೆ ಆದೇಶಿಸಬೇಕೆಂದು ಅರ್ಜಿದಾರರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *