ರಾಜ್ಯ ಸರ್ಕಾರಕ್ಕೆ ಉಡುಪಿಯ ನರ್ಮ್ ಬಸ್ ಪ್ರಯಾಣಿಕರಿಂದ ಹಿಡಿಶಾಪ

ಉಡುಪಿ: ಮಹಾದಾಯಿ ವಿಚಾರದಲ್ಲಿ ಕರ್ನಾಟಕ ಬಂದ್ ರಾಜ್ಯ ಸರ್ಕಾರಿ ಪ್ರೇರಿತ ಎಂಬುದು ಸಾಬೀತಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಬಂದ್ ಮಾಡುವಂತೆ ಕನ್ನಡಪರ ಅಥವಾ ರೈತ ಸಂಘಟನೆಗಳು ಕರೆ ನೀಡಿಲ್ಲ. ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ, ಅಹಿತಕರ ಘಟನೆ ನಡೆದಿಲ್ಲ. ಆದ್ರೆ ಸರ್ಕಾರಿ ನರ್ಮ್ ಬಸ್ಸನ್ನು ಏಕಾಏಕಿ ಬಂದ್ ಮಾಡಲಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಬಸ್ ಇಲ್ಲದೆ ಪರದಾಡುವಂತಾಯ್ತು.

ಉಡುಪಿ ನಗರದಲ್ಲಿ ಬೆಳಗ್ಗೆ ಒಂದು ಟ್ರಿಪ್ ಮಾಡಿದ ನರ್ಮ್ ಬಸ್ಸುಗಳು 11 ಗಂಟೆಯಾಗುತ್ತಿದ್ದಂತೆ ಸೇವೆ ನಿಲ್ಲಿಸಿವೆ. ಇದರಿಂದ ನರ್ಮ್ ಬಸ್ ನೆಚ್ಚಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಬಸ್ ಓಡಾಟ ಸ್ಥಗಿತ ಮಾಡುವಂತೆ ಆರ್‍ಟಿಸಿ ಮಂಗಳೂರು ವಿಭಾಗದಿಂದ ಆದೇಶ ಬಂದಿದೆ ಎನ್ನಲಾಗಿದೆ. ಸರ್ಕಾರಿ ಬಸ್ಸನ್ನು ಅವಲಂಬಿಸಿದ್ದ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಇದರಿಂದ ಸಮಸ್ಯೆಯಾಗಿದೆ.

ಉಡುಪಿಯಲ್ಲಿ ಖಾಸಗಿ ಬಸ್ ಗಳ ಅಟ್ಟಹಾಸ ಜೋರಾದಾಗ ಸಚಿವ ಪ್ರಮೋದ್ ಮಧ್ವರಾಜ್ ವಿಶೇಷ ಮುತುವರ್ಜಿಯಿಂದ ನರ್ಮ್ ಬಸ್ ಗಳು ರಸ್ತೆಗೆ ಇಳಿದಿದ್ದವು. ಖಾಸಗಿ ಬಸ್ ಗಳ ವಿರುದ್ಧ ಸಚಿವರೇ ಸಮರ ಸಾರಿದ್ದರು. ಆದ್ರೆ ಇದೀಗ ಉಡುಪಿ ಬಂದ್ ಇಲ್ಲದಿದ್ದರೂ ಸರ್ಕಾರಿ ಬಸ್ ಬಂದ್ ಮಾಡಿರುವುದು ರಾಜ್ಯ ಸರ್ಕಾರ ತನ್ನ ಅಭಿಪ್ರಾಯ ಹೇರಿದೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ನರ್ಮ್ ಬಸ್ ಉಡುಪಿಯಲ್ಲಿ ಓಡಾಡಿದ್ದರಿಂದ ಹಿರಿಯ ನಾಗರೀಕರಿಗೆ, ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿತ್ತು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹಿರಿಯ ನಾಗರೀಕ ಗೋವಿಂದ, ಖಾಸಗಿ ಸಿಟಿ ಬಸ್ ಕಂಡಕ್ಟರ್ ಗಳು ಪ್ರಯಾಣಿಕರ ಬಗ್ಗೆ ಅಗೌರವವಾಗಿ ವರ್ತಿಸುತ್ತಾರೆ. ನಾನು ಯಾವಾಗಲೂ ನರ್ಮ್ ಬಸ್ಸಲ್ಲೇ ಪ್ರಯಾಣ ಮಾಡುವುದು. ಇವತ್ತು ಬಸ್ ಇಲ್ಲ ಅಂತ ಮುನ್ಸೂಚನೆ ಇರಲಿಲ್ಲ. ಮೊದಲೇ ಗೊತ್ತಿದ್ದರೆ ನಾನು ಮನೆಯಿಂದ ಹೊರಗೆ ಬರ್ತಾಯಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *