ಟಿಕೆಟ್ ಕೈತಪ್ಪೋದಕ್ಕೆ ಅನಂತ್ ಕುಮಾರ್ ನೇರ ಹೊಣೆ: ರಮೇಶ್ ಆರೋಪ

ಬೆಂಗಳೂರು: ಅಕ್ರಮಗಳ ವಿರುದ್ಧ ಹೋರಾಟ ನನ್ನ ಮೊದಲ ಆದ್ಯತೆಯಾಗಿದ್ದು ಕಳೆದ 10 ವರ್ಷಗಳಿಂದ ಹಲವು ಅಕ್ರಮ ಬಯಲಿಗೆಳೆದಿದ್ದೇನೆ. ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ನೇರ ಹೊಣೆಗಾರರು ಎಂದು ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್‍ಆರ್ ರಮೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಯಡಿಯೂರು ವಾರ್ಡ್ ಅನ್ನು ಮಾದರಿ ವಾರ್ಡ್ ಆಗುವ ರೀತಿ ಅಭಿವೃದ್ಧಿಗೊಳಿಸಿದ್ದೇನೆ. 2018 ರ ಚುನಾವಣೆಯಲ್ಲಿ ಚಿಕ್ಕಪೇಟೆ ಟಿಕೆಟ್ ಆಕಾಕ್ಷಿಯಾಗಿದ್ದೆ. ನಮ್ಮ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯ ಆಯ್ಕೆಗಾಗಿ ನಡೆಸಿದ ಸರ್ವೆಯಲ್ಲಿಯೂ ನನಗೆ ಮತದಾರರು ಒಲವು ತೋರಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಸರ್ವೆಯಲ್ಲೂ ಪಕ್ಷದ ಎಲ್ಲ ವರಿಷ್ಠರೂ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂದು ತಿಳಿಸಿದರು.

ಸುಮಾರು 17 ಬಾರಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಎದೆಗುಂದದೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಂದ್ರ ಸಚಿವರು, ಸಂಸದರೂ ಆಗಿರುವ ಅನಂತ್ ಕುಮಾರ್ ಅವರಿಗೆ, ನಾನು ಚಿಕ್ಕಪೇಟೆ ಕ್ಷೇತ್ರದ ಆಕಾಂಕ್ಷಿ ಎಂದು ಗೊತ್ತಿದೆ. ಉದಯ್ ಗರುಡಾಚಾರ್ ಹೆಸರು ಪಟ್ಟಿಯಲ್ಲಿ ಬರುವುದಕ್ಕೆ ಹಾಗೂ ನನಗೆ ಟಿಕೆಟ್ ಕೈತಪ್ಪುವುದಕ್ಕೆ ಅನಂತ್ ಕುಮಾರ್ ನೇರ ಹೊಣೆಗಾರರು. ಅನಂತ್ ಕುಮಾರ್ ಹೊರತು ಪಡಿಸಿದರೆ ಬೇರೆ ಯಾವ ನಾಯಕರು ಇದರಲ್ಲಿ ಭಾಗಿಯಾಗಿಲ್ಲ ಎಂದು ದೂರಿದರು.

ಉದಯ್ ಗರುಡಾಚಾರ್ ಕಳೆದ ಬಾರಿ ಸೋತ ನಂತರ ಇದುವರೆಗೂ ಚಿಕ್ಕಪೇಟೆಗೆ ಕಾಲಿಟ್ಟಿಲ್ಲ. ಅನಂತ್ ಕುಮಾರ್ ಭ್ರಷ್ಟಾಚಾರ ಹೊತ್ತಿರುವ ಉದ್ಯಮಿಗೆ ಸಾಥ್ ನೀಡಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ ಎಂದರು.

ಹಲವು ದಿನಗಳ ಹಿಂದೆಯೇ ಫೇಸ್‍ಬುಕ್‍ನಲ್ಲಿ ಬ್ಲಾಕ್ ಕಾಂಗ್ರೆಸ್‍ನ ಕಾರ್ಯಕರ್ತರು ಬಿಜೆಪಿ ಟಿಕೆಟ್ ಸೇಲ್ ಆಗಿದೆ ಅನ್ನುವುದಾಗಿ ಹಾಕಿದ್ದರು. 8 ದಿನಗಳ ಹಿಂದೆಯೇ ಉದಯ್ ಗರುಡಾಚಾರ್ ಗೆ ಟಿಕೆಟ್ ಕನ್ಫರ್ಮ್ ಆಗಿರುವ ಕುರಿತು ವಿಷಯ ಲೀಕ್ ಆಗಿದ್ದು ಹೇಗೆ ಎಂದು ಪ್ರಶ್ನಿಸಿದರು.

ಅನಂತ್ ಕುಮಾರ್ ಗೆ ಬುದ್ಧಿವಂತ ಹೋರಾಟಗಾರರು ಬೇಕಾಗಿಲ್ಲ ಹಾಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಪಕ್ಷ ಬಿಡಬೇಕಾ ಅಥವಾ ಇರಬೇಕೋ ಅನ್ನುವ ತೀರ್ಮಾನ ನಾಳೆ ನನ್ನ ಅಭಿಮಾನಿಗಳ ಜೊತೆ ಸಭೆ ಮಾಡಿ ತೀರ್ಮಾನಿಸುತ್ತೇನೆ. ರಾಜ್ಯಾಧ್ಯಾಕ್ಷರ ಜೊತೆ ಮಾತನಾಡ ಬೇಕಿದೆ ಎಂದರು.

ಅಶೋಕ್ ಅವರು ನನ್ನ ಹೋರಾಟ, ಸಂಘಟನೆ, ಅಭಿವೃದ್ಧಿಯನ್ನು ಕಂಡವರು. ಅವರು ನನಗೆ ಸಹಕಾರ ನೀಡಬೇಕಿತ್ತು. ನಾಳೆ ಸಂಜೆಯೊಳಗೆ ನನಗೆ ಆಗಿರುವ ಅನ್ಯಾಯ ಸರಿ ಪಡಿಸುವ ಆಕಾಂಕ್ಷೆ ಇದೆ. ಆರ್ ಅಶೋಕ್ ಅವರು ಬ್ಲಾಕ್ ಮೇಲ್ ಮಾಡುವಂತವರಿಗೆ ಮಣಿಯುತ್ತಾರೆ. ನಮ್ಮಂಥಹ ಪ್ರೀತಿ ವಿಶ್ವಾಸ ಇರುವಂತವರಿಗೆ ಮಣಿಯುವುದಿಲ್ಲ. ಮುರಳೀಧರ್ ಹಾಗೂ ಜಾವಡೇಕರ್ ಅವರು ಇವತ್ತು ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಎನ್.ಆರ್. ರಮೇಶ್ ಅಸಮಾಧಾನ ವಿಚಾರ ಎಲ್ಲವೂ ಸುಳ್ಳು ಸುದ್ದಿ. ಯಾವುದೇ ಸಮಸ್ಯೆ ಇಲ್ಲ. ನಾನು ಕರೆದು ಮಾತನಾಡುತ್ತೇನೆ. ರಮೇಶ್ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ರಮೇಶ್ ಅವರಿಗೆ ಎಲ್ಲಾದರೂ ವಿಧಾನಸಭಾ ಟಿಕೆಟ್ ಕೊಡುತ್ತೇವೆ, ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *