ತಿರುಪತಿಯಂತೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿ- ಹೇಗೆ ತಯಾರಿಸ್ತಾರೆ..? ಏನಿದರ ವಿಶೇಷತೆ..?

ಚಾಮರಾಜನಗರ: ವಿಶ್ವ ಪ್ರಸಿದ್ಧಿಯಾದ ತಿರುಪತಿ ಲಡ್ಡು ಮಾದರಿಯಲ್ಲೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿಸಲಾಗುತ್ತಿದೆ. ಪ್ರತಿ ವರ್ಷ ಮೂರು ಬಾರಿ ರಥೋತ್ಸವ ನಡೆಯುವ ಮಾದಪ್ಪನ ಬೆಟ್ಟದಲ್ಲಿ ಲಕ್ಷಗಟ್ಟಲೆ ಲಡ್ಡು ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ. ಲಕ್ಷಾಂತರ ಮಂದಿಯ ಆರಾಧ್ಯ ದೈವ ಪವಾಡ ಪುರುಷ ಮಲೆ ಮಹದೇಶ್ವರ. ಅತೀ ಹೆಚ್ಚು ಆದಾಯ ಬರುವ ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವರುಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾನೆ. ಇಲ್ಲಿನ ಹುಂಡಿಯಲ್ಲಿ ವಾರ್ಷಿಕ 15ರಿಂದ 20 ಕೋಟಿ ಸಂಗ್ರಹವಾಗುತ್ತೆ. ಇನ್ನು ಚಿನ್ನದ ತೇರು ಎಳೆಯುವುದು, ವಿಶೇಷ ಪೂಜೆ, ಮುಡಿಸೇವೆ ಹೀಗೆ ಬೇರೆ ಬೇರೆ ರೀತಿಯಲ್ಲೂ ಕೋಟ್ಯಂತರ ರೂ. ಆದಾಯವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಬರುತ್ತಾರೆ.

ಹಬ್ಬಗಳು ರಜಾ ದಿನಗಳು, ಅಮಾವಸ್ಯೆ, ದೀಪಾವಳಿ, ಶಿವರಾತ್ರಿ, ಯುಗಾದಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಂತೂ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ ದೇವಸ್ಥಾನದಿಂದ ಪ್ರಸಾದ ರೂಪದಲ್ಲಿ ಲಡ್ಡು ನೀಡಲಾಗುತ್ತೆ. ಈ ಲಡ್ಡು ತಯಾರಿಕೆಗೆಂದು ದೇವಸ್ಥಾನದ ಮಗ್ಗುಲಲ್ಲೇ ಅಡುಗೆ ಕೋಣೆ ನಿರ್ಮಿಸಲಾಗಿದೆ. ಈ ಬಾರಿ ನವೆಂಬರ್ 8ರಂದು ರಥೋತ್ಸವ ನಡೆಯಲಿದ್ದು, ದೀಪಾವಳಿಗೆಂದೆ ಮೂರು ಲಕ್ಷ ಲಡ್ಡುಗಳನ್ನು ತಯಾರಿ ಮಾಡಲಾಗಿದೆ.

ದೇವಸ್ಥಾನದ 40ಕ್ಕೂ ಹೆಚ್ಚು ಮಂದಿ ನೌಕರರು ಕಳೆದ 15 ದಿನಗಳಿಂದ ಲಡ್ಡು ತಯಾರಿಸುತ್ತಾರೆ. ಸಕ್ಕರೆ, ಕಡ್ಲೆಹಿಟ್ಟು, ತುಪ್ಪ, ಏಲಕ್ಕಿ ಪಚ್ಚೆಕರ್ಪೂರ, ಕಲ್ಲುಸಕ್ಕರೆ, ಒಣದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಹದವಾಗಿ ಮಿಶ್ರಣ ಮಾಡಿ ಲಡ್ಡು ತಯಾರಿಸಲಾಗುತ್ತೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೆ ಲಡ್ಡು ತಯಾರಿಕೆಗೆ ಬಳಸಲಾಗುತ್ತೆ. ಪ್ರತಿ ಲಡ್ಡು ಒಂದೇ ಸಮನಾದ ಗಾತ್ರ ಹೊಂದಿದ್ದು 100 ಗ್ರಾಂ ತೂಕವಿರುತ್ತೆ. ಲಡ್ಡು ವಿತರಣೆಗೆಂದೇ ವಿಶೇಷ ಕೌಂಟರ್‍ಗಳನ್ನು ತೆರೆಯಲಾಗಿದ್ದು 20 ರೂ.ಗೆ ಒಂದರಂತೆ ಭಕ್ತರಿಗೆ ಲಡ್ಡು ಪ್ರಸಾದ ನೀಡಲಾಗುತ್ತೆ. ಶುಚಿ, ರುಚಿಯಾಗಿರುವ ಈ ಲಡ್ಡು ಪ್ರಸಾದಕ್ಕೆ ವಿಶೇಷ ಸಂದರ್ಭಗಳಲ್ಲಿ ಭಾರೀ ಬೇಡಿಕೆ ಇದೆ.

ತಿರುಪತಿ ಮಾದರಿಯಲ್ಲೇ ಇಲ್ಲಿ ಲಡ್ಡು ತಯಾರಿಸಲಾಗುತ್ತೆ. ಹಾಗಾಗಿ ಮಹದೇಶ್ವರ ಬೆಟ್ಟದ ಲಡ್ಡು ತಿರುಪತಿ ಲಡ್ಡುವಿನಷ್ಟೇ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೇ ಬಳಸುವುದರಿಂದ ಎಷ್ಟೇ ದಿನವಿಟ್ಟರೂ ಈ ಲಡ್ಡು ಕೆಡುವುದಿಲ್ಲ. ವಾರ್ಷಿಕ 15 ಲಕ್ಷ ಲಡ್ಡುಗಳನ್ನು ಇಲ್ಲಿ ತಯಾರಿಸಲಾಗುತ್ತೆ. ಲಡ್ಡು ತಯಾರಿಕೆಯಿಂದಲೇ ಮಾದಪ್ಪನ ಸನ್ನಿಧಿಗೆ ಕೋಟ್ಯಂತರ ರೂ. ಆದಾಯ ಹರಿದು ಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *