ಈಗ ಉತ್ತರ ನೀಡದೇ ಇದ್ರೆ ಜನ ಉತ್ತರ ಕೊಡ್ತಾರೆ: ಸಿಎಂಗೆ ಡಿವಿಎಸ್ ಪಂಚ ಪ್ರಶ್ನೆ

ಬೆಂಗಳೂರು: ನಗರದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಕುರಿತು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಸದಾನಂದ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.

ಟ್ವೀಟ್ ಮೂಲಕ ರಾಜ್ಯದ ಪಂಚ ಮುಗ್ಧರಿಗೆ ಪಂಚ ಪ್ರಶ್ನೆಗಳು ಎಂದು ಹೇಳಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗ ರೆಡ್ಡಿಯವರು, ಬೆಂಗಳೂರು ಉಸ್ತುವಾರಿ ಸಚಿವ ಕೆ ಜೆ ಜಾರ್ಜ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇವರುಗಳಿಗೆ ಟ್ಯಾಗ್ ಮಾಡಿದ್ದಾರೆ.

ಸಚಿವರ ಪ್ರಶ್ನೆಗಳು
ಪ್ರಶ್ನೆ 1 – ಪಂಚ ಮುಗ್ಧರೇ ದಲಿತ ಯುವಕ ಸಂತೋಷನ ಕೊಲೆ ನಿಮ್ಮ ಮುಗ್ಧ ಸುತ್ತೋಲೆಯ ಪರಿಣಾಮ ಎಂದು ಒಪ್ಪಿಕೊಳ್ಳುತೀರಾ?
ಪ್ರಶ್ನೆ -2 ನಿಮ್ಮ ಮುಗ್ಧಸುತ್ತೋಲೆ ಹೊರಡಿಸುವ ಮುನ್ನ ಸಮಾಜ ದ್ರೋಹಿ ಶಕ್ತಿಗಳಿಗೆ ನೀವು ರಕ್ಷಾ ಕವಚ ಹಾಕುತ್ತಿದೀರೆಂಬ ಕನಿಷ್ಠ ಜ್ಞಾನವು ನಿಮಗೆ ಇರಲಿಲ್ಲವಾ?
ಪ್ರಶ್ನೆ -3 ದಲಿತ ಯುವಕ ಸಂತೋಷನ ಹೆತ್ತವರಿಗೆ ಏನೆಂದು ಹೇಳುತ್ತೀರಿ ಅವರನ್ನು ಮುಗ್ಧರು ಕೊಂದದೆಂದು ಹೇಳುತ್ತೀರಾ?

ಪ್ರಶ್ನೆ -4 23 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಕಾನೂನು ವ್ಯವಸ್ಥೆ ಅನ್ನುವುದು ಮರೀಚಿಕೆಯಾಗಿದೆ ನೀವು ಇದೆಲ್ಲವನ್ನು ನೋಡಿಯೂ ನೋಡದಂತೆ ಮುಗ್ಧರಾಗಿ ಉಳಿದಿರುವುದರ ಹಿಂದಿನ ಜಾಣ ಮುಗ್ಧತೆ ಏನು?
ಪ್ರಶ್ನೆ – 5 ನಿಮ್ಮ ಮುಗ್ಧ ತುಷ್ಟೀಕರಣಕ್ಕೆ ಕೊನೆ ಯಾವಾಗ? ನಿಮ್ಮಗಳ ಆಡಳಿತದಲ್ಲಿ ಹಿಂದೂ ಬಾಂಧವರ ರಕ್ತ ಬಸಿಯುವ ದಾಹಕ್ಕೆ ಕೊನೆ ಯಾವಾಗ? ಒಂದಂತೂ ನೆನಪಿಟ್ಟುಕ್ಕೊಳ್ಳಿ ನೀವೀಗ ಉತ್ತರ ಕೊಡದಿದ್ದರೆ. ಚುನಾವಣೆಯಲ್ಲಿ ರಾಜ್ಯದ ಜನತೆ ಕೊಟ್ಟೇ ಕೊಡುತ್ತಾರೆ.

ಜೆ.ಸಿ. ನಗರದ ನಿವಾಸಿಯಾಗಿರೋ 28 ವರ್ಷದ ಸಂತೋಷ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಬಿಜೆಪಿ ಪರ ಓಡಾಡಿಕೊಂಡಿದ್ದರು. ಬುಧವಾರ ರಾತ್ರಿ ಸುಮಾರು 7:30 ರಲ್ಲಿ ಹೊತ್ತಿಗೆ ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಅದೇ ಏರಿಯಾದ ವಾಸೀಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬವರು ಕೂಡ ಅಲ್ಲೇ ಟೀ ಕುಡಿಯುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ವಾಸೀಮ್ ಎಂಬಾತ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯ ಪ್ರಕರಣ ಸಂಬಂಧ ವಸೀಂ, ಫಿಲಿಪ್ಸ್ ಎಂಬ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಠಾಣೆಯೆದುರು ಪ್ರತಿಭಟನೆ ಸಹ ನಡೆಸಿದ್ದಾರೆ. ಸಂತೋಷ್ ಹತ್ಯೆ ರಾಜಕೀಯ ಪ್ರೇರಿತ ಕೊಲೆ ಅಂತ ಆರೋಪಿಸಿದ್ದು, ವಸೀಮ್ ಸ್ಥಳೀಯ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರ ಮಗ, ಅವನಿಗೂ ಬಿಜೆಪಿಗೂ ಆಗುತ್ತಿರಲಿಲ್ಲ. ಹಾಗಾಗಿ ಬಿಜೆಪಿಯ ಪರ ಓಡಾಡುತ್ತಿದ್ದ ಸಂತೋಷ್‍ನನ್ನ ಕೊಲೆಗೈಯ್ಯಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.

Comments

Leave a Reply

Your email address will not be published. Required fields are marked *