ನ.10ಕ್ಕೆ ಕೊಡಗು ಬಂದ್: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ಕರೆ

ಮಡಿಕೇರಿ: ರಾಜ್ಯ ಸರ್ಕಾರ ನವೆಂಬರ್ 10ಕ್ಕೆ ಹಮ್ಮಿಕೊಂಡಿರುವ ಟಿಪ್ಪು ಜಯಂತಿಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಅದೇ ದಿನ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕೊಡಗು ಬಂದ್‍ಗೆ ಕರೆ ನೀಡಿದೆ.

ಸರ್ಕಾರ ಆಯೋಜಿಸುತ್ತಿರುವ ಟಿಪ್ಪು ಜಯಂತಿಯನ್ನು ಖಂಡಿಸಿ ಕೊಡಗು ಬಂದ್‍ಗೆ ಕರೆ ನೀಡುವುದಾಗಿ ಸೋಮವಾರಪೇಟೆಯಲ್ಲಿ ಟಿಪ್ಪು ಜಯಂತಿ ವಿರೋಧಿ ಸಮಿತಿ ಸ್ಪಷ್ಟನೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಟಿಪ್ಪು ಜಯಂತಿಯ ಬಗ್ಗೆ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಇದು ರಾಜ್ಯ ಸರ್ಕಾರದಿಂದ ನಿರ್ಧಾವಾಗಿರುವ ಕಾರ್ಯಕ್ರಮ. ಹೀಗಾಗಿ ಜನರು ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ಐಜಿಪಿ ಶರತ್ಚಂದ್ರ ಮಾತನಾಡಿ, ಜಯಂತಿಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಒಂದು ವೇಳೆ ಯಾರಾದರೂ ಏನಾದರೂ ಮಾಡಿ, ಶಾಂತಿ ಕದಡುವ ಯತ್ನ ಮಾಡಿದರೆ ಅಂತಹವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಒಂದು ರ್ಯಾಪಿಡ್ ಆ್ಯಕ್ಷನ್ ಟೀಮ್, ಕೆಎಸ್‍ಆರ್‍ಪಿ ತುಕುಡಿ ಸೇರಿದಂತೆ ಒಟ್ಟು 1,500 ಪೊಲೀಸರಿಂದ ಟಿಪ್ಪು ಜಯಂತಿಗೆ ಭದ್ರತೆ ನೀಡಲಾಗುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಗೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ನಡುವೆಯೇ ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ಆಚರಿಸಿದ್ದರು.

2015ರ ನವೆಂಬರ್ 11ರಂದು ಟಿಪ್ಪು ಜಯಂತಿಯಂದು ನಡೆದ ಘರ್ಷಣೆಯ ವೇಳೆ ಕುಟ್ಟಪ್ಪ ಮೃತಪಟ್ಟಿದ್ದರು. ಚಾರ್ಜ್ ಶೀಟ್ ನಲ್ಲಿ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದಾಗ ಕುಟ್ಟಪ್ಪ ಕಾಲು ಜಾರಿ ಸಿಮೆಂಟ್ ಚರಂಡಿ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಉಲ್ಲೇಖಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *