ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರ – ಎಲ್ಲಾ ಚೆನ್ನಾಗಿದೆ ಎಂದ ಮೋದಿ ವಿರುದ್ಧ ಕಿಡಿ

ಬೆಂಗಳೂರು: ನೆರೆ ಬಂದೂ 2 ತಿಂಗಳಾದರೂ ರಾಜ್ಯದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಾವು ಆಯ್ಕೆ ಮಾಡಿ ಕಳುಹಿಸಿದ 25 ಸಂಸದರು ಸಹ ನಮ್ಮ ಕಷ್ಟ ಕೇಳುತ್ತಿಲ್ಲ. ಪ್ರಧಾನಿ ಮೋದಿ ಪ್ರೀತಿಸುವ ಜನರೇ ಇದೀಗ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಎಲ್ಲಾ ಚೆನ್ನಾಗಿದೆ ಎಂದು, ಬಾಗುಂದಿ, ಭಾರತ್ ದೇಶ್‍ಮೇ ಸಬ್ ಕುಚ್ ಅಚ್ಚಾ ಹೇ ಹೀಗಂತ ದೂರದ ಅಮೆರಿಕದಲ್ಲಿ ಪ್ರಧಾನಿ ಮೋದಿ ಘಂಟಾಘೋಷವಾಗಿ ಹೇಳಿದರು. ಇದೇ ಹೊತ್ತಲ್ಲಿ, ರಣಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರ ಕರ್ನಾಟಕ ನಲುಗಿ ಹೋಗಿತ್ತು. ಇದನ್ನೂ ಓದಿಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

ಪ್ರವಾಹ ಬಂದು ಬದುಕು ಕುಸಿದು ಎರಡು ತಿಂಗಳಾಗುತ್ತಾ ಬಂದರು ಕೇಂದ್ರ ಸರ್ಕಾರ ಪರಿಹಾರ ಹಣ ನೀಡುತ್ತಿಲ್ಲ. ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ. ಪರಿಹಾರ ಎಲ್ಲಿ ಎಂದು ಕೇಳಿದರೆ, ಸಚಿವ ಈಶ್ವರಪ್ಪನವರು ಈಗ ಕೊಟ್ಟಿರೋದೇ ಜಾಸ್ತಿ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಇದೇ ಹೊತ್ತಲ್ಲಿ ಪ್ರಧಾನಿ ಮೋದಿ, ರಷ್ಯಾಗೆ ಸಾಲ ಕೊಡುತ್ತಾರೆ. ಅಲ್ಲದೆ ಕೆಲ ಕೆರಿಬಿಯನ್ ದೇಶಗಳಿಗೆ ಸಾಲ, ನೆರವು ಘೋಷಣೆ ಮಾಡುತ್ತಾರೆ.

ಸಾಲ ಕೊಟ್ಟ ಪರಿಣಾಮ ಬಿಜೆಪಿಗೆ ಅತೀ ಹೆಚ್ಚು ಮತ ಕೊಟ್ಟು ಗೆಲ್ಲಿಸಿದ ಉತ್ತರ ಕರ್ನಾಟಕದ ಮಂದಿ ಇದೀಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ಸಿಡಿದು ನಿಂತಿದ್ದಾರೆ. ಸೇವ್ ಉತ್ತರ ಕರ್ನಾಟಕ ಎಂಬ ಹ್ಯಾಷ್‍ಟ್ಯಾಗ್‍ನಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

ಮೋದಿ ಮೇನಿಯಾದಲ್ಲಿ ಮತದಾರರು ರಾಜ್ಯದಿಂದ ಬಿಜೆಪಿ 25 ಸಂಸದರನ್ನು ಆರಿಸಿ ಲೋಕಸಭೆಗೆ ಕಳುಹಿಸಿಕೊಟ್ಟರು. ಆದರೆ ನೆರೆ ಬಂದಾಗ ಪ್ರಧಾನಿ ಮೋದಿಗೆ ಕರುನಾಡು ನೆನಪಾಗಲಿಲ್ಲ. ಈಗ ಜನ ಎಚ್ಚೆತ್ತು ಕೇಂದ್ರದ ವಿರುದ್ಧ ವಾಗ್ದಾಳಿಗೆ ಮುಂದಾಗಿದ್ದಾರೆ. ಮೋದಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸಂತ್ರಸ್ತರು ಎಚ್ಚರಿಕೆ ಕೊಡುತ್ತಾರೆ.

ಇಷ್ಟಕ್ಕೆ ನಿಲ್ಲುತ್ತಿಲ್ಲ ಉತ್ತರ ಕರ್ನಾಟಕ ಮಂದಿಯ ಕೋಪ. ಇದೇ 29ಕ್ಕೆ ರಾಜ್ಯಾದ್ಯಂತ ಸೇವ್ ಉತ್ತರ ಕರ್ನಾಟಕ. ಉತ್ತರ ಕರ್ನಾಟಕ ಬಿಲಾಂಗ್ಸ್ ಇಂಡಿಯಾ ಎನ್ನುತ್ತ ದೊಡ್ಡ ಮಟ್ಟದಲ್ಲಿ ಬಿಜೆಪಿ ಮತ್ತು ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ರೂ ನಮ್ಮ ಸಂಸದರು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವ ರೀತಿ ಸೈಲೆಂಟಾಗಿ ಕುಳಿತ್ತಿದ್ದಾರೆ.

Comments

Leave a Reply

Your email address will not be published. Required fields are marked *