ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಚಟ್ನಿ ಮಾಡುವ ವಿಧಾನ

ದನೆಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೂ ಬದನೆಕಾಯಿ ಬಾತ್ ಅಂದ್ರೆ ಕೆಲವರಿಗೆ ಬಲು ಇಷ್ಟ. ಖಡಕ್ ರೊಟ್ಟಿ ಜೊತೆ ಎಣ್ಣೆಗಾಯಿ ಇದ್ರೆ ಆ ಊಟದ ಗಮ್ಮತ್ತೇ ಬೇರೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಬದನೆಕಾಯಿಗೆ ವಿಶೇಷ ಸ್ಥಾನಮಾನ. ಗೃಹಿಣಿಯರು ಬದನೆಕಾಯಿ ಬಳಸಿ ವಿವಿಧ ರಸಾಯನಗಳನ್ನ ಮಾಡ್ತಾರೆ. ಅಂತಹ ವಿಶೇಷ ಪಾಕಗಳಲ್ಲೊಂದು ಬದನೆಕಾಯಿ ಚಟ್ನಿ. ದಿನನಿತ್ಯ ದೋಸೆ, ರೊಟ್ಟಿ, ಚಪಾತಿ ಜೊತೆ ಒಂದೇ ರೀತಿಯ ಚಟ್ನಿ ತಿಂದು ಬೇಜಾರಾಗಿದ್ರೆ ಒಮ್ಮೆ ಬದನೆಕಾಯಿ ಚಟ್ನಿ ತಯಾರಿಸಿ ನೋಡಿ.

ಬೇಕಾಗುವ ಸಾಮಗ್ರಿಗಳು
* ಬದನೆಕಾಯಿ(ಕೆಂಪು)- 2-3
* ಕಾಯಿ ತುರಿ – 1 ಕಪ್
* ಹುರಿಗಡಲೆ – 2-3 ಸ್ಪೂನ್
* ಹಸಿಮೆಣಸಿನಕಾಯಿ – 5-6
* ಬೆಳ್ಳುಳ್ಳಿ – 6 ಎಸಳು
* ಕೊತ್ತಂಬರಿ – ಸ್ವಲ್ಪ
* ಎಣ್ಣೆ – ಒಗ್ಗರಣೆಗೆ
* ಸಾಸಿವೆ – ಸ್ವಲ್ಪ
* ಕರಿಬೇವು – ಸ್ವಲ್ಪ

ಮಾಡುವ ವಿಧಾನ
* ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆಯಿರಿ.
* ಒಂದು ಪಾತ್ರೆ ಬಿಸಿಗಿಟ್ಟು ನೀರು ಕುದಿಯಲು ಬಿಡಿ
* ಈಗ ಕುದಿಯುತ್ತಿರುವ ನೀರಿಗೆ ಬೆಳ್ಳುಳ್ಳಿ, ಬದನೆಕಾಯಿ ಸೇರಿಸಿ ಬೇಯಿಸಿಕೊಳ್ಳಿ.
* ಬದನೆ, ಬೆಳ್ಳುಳ್ಳಿ ಬೆಂದ ಬಳಿಕ ನೀರು ಸೋಸಿಕೊಳ್ಳಿ
* ಈಗ ಒಂದು ಜಾರ್‍ಗೆ ಬೆಂದ ಬದನೆ, ಬೆಳ್ಳುಳ್ಳಿ, ಕಾಯಿ ತುರಿ, ಹಸಿಮೆಣಸಿನಕಾಯಿ, ಹುರಿಗಡಲೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ.
* ಚಟ್ನಿ ನುಣ್ಣಗೆ ಆಗಿದೆ ಅನ್ನೋವಾಗ ಕೊನೆಗೇ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ಸುತ್ತು ಮಿಕ್ಸಿ ಆಡಿಸಿ.
(ಕೊತ್ತಂಬರಿ ಸೊಪ್ಪು ಪೂರ್ತಿ ನುಣ್ಣಗೆ ಆಗದಿರಲಿ, ಸೊಪ್ಪು ತರಿತರಿಯಾಗಿ ಕಾಣುತ್ತಿದ್ದರೆ ಚಟ್ನಿ ಸವಿಯಲು ಚೆಂದ ಮತ್ತು ನೋಡೋಕು ಚೆಂದ)
* ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಒಗ್ಗರಣೆಗೆ ಸಾಸಿವೆ, ಕರಿಬೇವು ಹಾಕಿ ಸಿಡಿಸಿ.
* ಈಗ ಒಗ್ಗರಣೆಯನ್ನು ಚಟ್ನಿಗೆ ಮಿಶ್ರಣ ಮಾಡಿ.. ಸರ್ವ್ ಮಾಡಿ.
ಇದು ಚಪಾತಿ, ದೋಸೆ, ರೊಟ್ಟಿಗೆ ಮ್ಯಾಚ್ ಆಗುವಂತ ಚಟ್ನಿ, ಜೊತೆಗೆ ಬಿಸಿಬಿಸಿ ಅನ್ನಕ್ಕೂ ಹೊಂದಿಕೊಳ್ಳುತ್ತದೆ.

Comments

Leave a Reply

Your email address will not be published. Required fields are marked *