ಹ್ಯಾರಿಸ್ ಮೇಲೆ ಬಿತ್ತು ಮೊದಲ ಕೇಸ್: ಶಾಸಕರ ಅಹಂಕಾರ ಇಳಿಸಿದ ಆರ್ ಓ ನಂದಿನಿ

ಬೆಂಗಳೂರು: ಕೊನೆ ಕ್ಷಣದಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಶಾಂತಿನಗರ ಶಾಸಕ ಹ್ಯಾರಿಸ್ ಮೇಲೆ ಇಂದು ಕೇಸ್ ಬಿದ್ದಿದೆ.

ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಇಂದು ಮೇಯೋ ಹಾಲ್‍ನ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಆಸ್ಟಿನ್ ಟೌನ್ ಸರ್ಕಲ್ ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 3 ಗಂಟೆಗೆ ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವಧಿ ಮುಕ್ತಾಯಕ್ಕೆ 10 ನಿಮಿಷ ಬಾಕಿ ಇರುವಾಗ ಹ್ಯಾರಿಸ್ ನಾಮಪತ್ರ ಸಲ್ಲಿಸಿದರು.

ಮಾಧ್ಯಮದವರ ಜೊತೆ ಮಾತನಾಡುವಾಗ ಮಗನ ವಿಚಾರ ಕೇಳಿದ್ದಕ್ಕೆ ಹ್ಯಾರಿಸ್, ನಮ್ಮ ತಾಯಿಗೆ ಹುಚ್ಚು ಹಿಡಿದಿದ್ದನ್ನು ಕೇಳಬಹುದು, ನಿಮ್ಮ ತಾಯಿಗೆ ಹುಚ್ಚು ಹಿಡಿದರೆ ಹೀಗೆ ಕೇಳುತ್ತಿರಾ ಎಂದು ಅಹಂಕಾರದಿಂದ ಪ್ರಶ್ನಿಸಿ ರೋಡ್ ಶೋ ಮಾಡಲು ಮುಂದಾದರು.

ದರ್ಪದ ಉತ್ತರ ನೀಡಿ ರೋಡ್ ಶೋ ಮಾಡುತ್ತಿದ್ದ ಹ್ಯಾರಿಸ್ ಅವರಿಗೆ ಆರ್ ಓ ನಂದಿನಿ ಸರಿಯಾಗಿಯೇ ಶಾಕ್ ನೀಡಿದರು. ಟೆಂಪೋ ಮೇಲೆ ಏರಿ ಗಟ್ಟಿ ಧ್ವನಿವರ್ಧಕ ಬಳಸಿ ಭಾಷಣ ಮಾಡುತ್ತಿದ್ದ ಹ್ಯಾರಿಸ್‍ರನ್ನು ಚುನಾವಣಾಧಿಕಾರಿ ನಂದಿನಿ ಅವರು ಕೆಳಗಿಳಿಸಿ ವಾಹನವನ್ನು ಸೀಜ್ ಮಾಡಿದರು. ವಾಹನ ಸೀಜ್ ಆದ ಬಳಿಕ ಹ್ಯಾರಿಸ್ ನಡೆದುಕೊಂಡು ಹೋದರು.

ಈ ರೀತಿಯಾಗಿ ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಕೈ ಕಟ್ಟಿ ನಿಂತಿದ್ದು ಯಾಕೆ? 100 ಮೀಟರ್ ಒಳಗಡೆ ಐದು ಜನ ಮಾತ್ರ ಬರಬೇಕು ಎಂದು ನಿಯಮ ಇದ್ದರೂ ಐವತ್ತು ಜನರನ್ನು ಬಿಟ್ಟಿದ್ದು ಯಾಕೆ? ಕಾನೂನಿಗೆ ನಿಮ್ಮ ಬಳಿ ಗೌರವ ಇಲ್ವಾ? ಮುಖ್ಯ ಚುನಾವಣಾಧಿಕಾರಿಗೆ ನಿಮ್ಮ ವಿರುದ್ಧ ದೂರು ನೀಡುತ್ತೇನೆ ಎಂದು ಪೊಲೀಸರನ್ನು ಅಧಿಕಾರಿ ನಂದಿನಿಯವರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

Comments

Leave a Reply

Your email address will not be published. Required fields are marked *