ಬಳ್ಳಾರಿ, ದಾವಣಗೆರೆಯ ಹತ್ತಾರು ಹಳ್ಳಿಗಳಲ್ಲಿ ಆಚರಿಸಲ್ಲ ಯುಗಾದಿ ಹಬ್ಬ!

ಬಳ್ಳಾರಿ/ದಾವಣಗೆರೆ: ಯುಗಾದಿ ಅಂದ್ರೆ ಅದು ಹೊಸ ಸಂವತ್ಸರದ ಆದಿ. ಪ್ರಕೃತಿ ಚಿಗುರೊಡೆಯುವ ಕಾಲ. ಹೀಗಾಗಿ ಈ ದಿನ ಹೊಸ ಬಟ್ಟೆ ತೊಟ್ಟು ಬೇವು-ಬೆಲ್ಲ ಸವಿಯೋದು ಎಲ್ಲೆಡೆ ಇರುವ ವಾಡಿಕೆ. ಆದ್ರೆ ಬಳ್ಳಾರಿ, ದಾವಣಗೇರಿ ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಯುಗಾದಿ ಹಬ್ಬವನ್ನೇ ಆಚರಿಸಲ್ಲ.

ಹೌದು. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಜಾಪುರ ಗ್ರಾಮ, ಕೂಡ್ಲಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕು ಸೇರಿದಂತೆ ಡಾವಣಗೆರೆ ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಇಂದಿಗೂ ಯುಗಾದಿ ಹಬ್ಬ ಆಚರಣೆ ಮಾಡಲ್ಲ. ಈ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಆಚರಣೆ ಮಾಡೋಕೆ ಜನರು ಭಯ ಬೀಳುತ್ತಾರೆ.

ಯುಗಾದಿ ಹಬ್ಬವನ್ನು ಆಚರಣೆ ಮಾಡಿದ್ರೆ ಮನೆಯ ಜನರಿಗೆ ಕೆಡಕು ಉಂಟಾಗುತ್ತದೆ. ಇಲ್ಲವೇ ಮನೆಯಲ್ಲಿ ಯಾರಾದ್ರೂ ಸಾವನ್ನಪ್ಪುತ್ತಾರೆ ಅನ್ನೋ ನಂಬಿಕೆ ಈ ಗ್ರಾಮಗಳಲ್ಲಿದೆ. ಹೀಗಾಗಿ ಹಿರಿಯರು ಆಚರಣೆ ಮಾಡಿಕೊಂಡ ಪದ್ಧತಿಯನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೀವಿ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

ಈ ಪ್ರದೇಶದ ಹಲವು ಸಮುದಾಯಗಳು ಈ ಆಚರಣೆಯನ್ನ ಇಂದಿಗೂ ಮಾಡುತ್ತಿಲ್ಲ. ಅದರಲ್ಲೂ ಗಂಗಾಮಸ್ತರು, ನಾಯಕ, ಉಪ್ಪಾರ ಜನಾಂಗದ ಜನರು ಹೆಚ್ಚಾಗಿ ಈ ಹಬ್ಬವನ್ನ ಆಚರಣೆ ಮಾಡಲು ಭಯ ಪಡುತ್ತಾರೆ. ಹಿಂದೆ ಈ ಸಮಾಜದ ಹಿರಿಯರು ಬೇವು ತರಲು ಹೋದವರು ಮನೆಗೆ ಮರಳಿ ಬಂದಿಲ್ಲವಂತೆ. ಹೀಗಾಗಿ ಯುಗಾದಿ ಆಚರಣೆ ಮಾಡಿದ್ರೆ ಕೆಡುಕು ಉಂಟಾಗುತ್ತದೆ ಅನ್ನೋ ಭಯ ಇವರಲ್ಲಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಇಡೀ ದೇಶ ಯುಗಾದಿ ಸಡಗರದಲ್ಲಿದ್ದರೆ, ಈ ಹಳ್ಳಿಗಳಲ್ಲಿ ಮಾತ್ರ ಹಳೆಯ ನಂಬಿಕೆಯಂತೆ ಯಾವುದೇ ಆಚರಣೆ ಮಾಡುವುದಿಲ್ಲ.

Comments

Leave a Reply

Your email address will not be published. Required fields are marked *