ಶೌಚಾಲಯವಿಲ್ಲದ್ದಕ್ಕೆ ಮನೆ ಬಿಟ್ಟ ವಧು: ಆತ್ಮಹತ್ಯೆ ಮಾಡಿಕೊಂಡ ವರ!

ಸಾಂದರ್ಭಿಕ ಚಿತ್ರ

ಚೆನ್ನೈ: ಮನೆಯಲ್ಲಿ ಶೌಚಾಲಯ ಇಲ್ಲದ್ದರಿಂದ ನೂತನವಾಗಿ ಮದುವೆಯಾಗಿದ್ದ ವಧುಯೊಬ್ಬಳು ಮನೆ ಬಿಟ್ಟು ಹೋಗಿದ್ದಕ್ಕೆ, ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆ ಓಮಲೂರು ಬಳಿಯ ಕೊಟ್ಟಗೌಂಡಪಟ್ಟಿಯಲ್ಲಿ ನಡೆದಿದೆ.

ಕೊಟ್ಟಗೌಂಡಪಟ್ಟಿಯ ಸೆಲ್ವದೊರೆ ಆತ್ಮಹತ್ಯೆಗೆ ಶರಣಾದ ವರ. ಸೆಲ್ವದೊರೈ ಹಾಗೂ ದೀಪಾ ಪ್ರೀತಿಸಿ ಸೆಪ್ಟೆಂಬರ್ 23 ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಅದೇ ದಿನ ಸೆಲ್ವದೊರೈ ತನ್ನ ಪತ್ನಿಯನ್ನು ಕೊಟ್ಟಗೌಂಡಪಟ್ಟಿಯಲ್ಲಿರುವ ಮನೆಗೆ ಕರೆತಂದಿದ್ದನು. ಮೊದಲನೇ ಬಾರಿಗೆ ಗಂಡನ ಮನೆಗೆ ಆಗಮಿಸಿದ ವಧು ದೀಪಾಗೆ ದೊಡ್ಡ ಆಘಾತವೇ ಕಾದಿತ್ತು. ಏಕೆಂದರೆ ಸೆಲ್ವದೊರೈನ ಮನೆಯಲ್ಲಿ ಶೌಚಾಲಯವಿರಲಿಲ್ಲ. ಅಲ್ಲದೇ ಬಹಿರ್ದೆಸೆಗೆಂದು ಬಯಲಿಗೆ ಹೋಗಬೇಕಾದ ಪರಿಸ್ಥಿತಿ ನಿಮಾರ್ಣವಾಗಿತ್ತು.

ಶೌಚಾಲಯವಿಲ್ಲದ್ದರಿಂದ ಬೇಸತ್ತ ವಧು ಮನೆಯಲ್ಲಿ ಶೌಚಾಲಯ ನಿರ್ಮಾಣವಾಗುವವರೆಗೂ ಹೋಟೆಲ್ ನಲ್ಲಿ ಉಳಿದುಕೊಳ್ಳೋಣ ಎಂದು ಪತಿ ಬಳಿ ಕೇಳಿಕೊಂಡಿದ್ದಾಳೆ. ಆದರೆ ಪತ್ನಿಯ ಮಾತನ್ನು ಸೆಲ್ವದೊರೈ ನಿರಾಕರಿಸಿದ್ದರಿಂದ ಬೇಸತ್ತ ದೀಪಾ ತನ್ನ ತವರು ಮನೆಗೆ ತೆರಳಿದ್ದಾಳೆ. ಇದಾದ ಬಳಿಕ  ದೀಪಾಳ ಮನೆಗೆ ತೆರಳಿದ ಸೆಲ್ವರಾಜು ಆಕೆಯ ಮನವೊಲಿಸಲು ಹರಸಾಹಸಪಟ್ಟಿದ್ದಾನೆ. ಆದರೆ ಆಕೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವವರೆಗೂ ಬರುವುದಿಲ್ಲವೆಂದು ಕಡ್ಡಿ ಮುರಿದಹಾಗೆ ಹೇಳಿ ಕಳುಹಿಸಿದ್ದಾಳೆ.

ಪತ್ನಿಯ ನಡೆಯಿಂದ ಬೇಸರಗೊಂಡ ಸೆಲ್ವದೊರೈ ತನ್ನ ಊರಿಗೆ ವಾಪಾಸ್ಸಾಗಿದ್ದ. ಅಲ್ಲದೇ ಇಡೀ ದಿವಸ ಬೇಸರದಿಂದ ಕಾಲಕಳೆದಿದ್ದಾನೆ. ಆದರೆ ಗುರುವಾರ ಬೆಳಗಿನ ಜಾವ ಮನೆಯ ಬಳಿಯಿರುವ ಬಾವಿಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶೌಚಾಲಯದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದ ಕೂಡಲೇ ಜಿಲ್ಲಾಧಿಕಾರಿಗಳು ಕೊಟ್ಟಗೌಂಡಪಟ್ಟಿ ಗ್ರಾಮದ ಶೌಚಗೃಹಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲು ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ವಿಶೇಷವೇನೆಂದರೆ ಅಧಿಕೃತ ಮಾಹಿತಿಯ ಪ್ರಕಾರ ಸೇಲಂ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎನಿಸಿಕೊಂಡಿದೆ. ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಸುಮಾರು 2 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಘಟನೆ ನಡೆದಿರುವ ಗ್ರಾಮದಲ್ಲಿ ಸಮೂಹಿಕ ಶೌಚಾಲಯವಿರುವ ಬಗ್ಗೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *