ವಿಶ್ವದ ಮೊದಲ ತಲೆ ಕಸಿ ಯಶಸ್ವಿ ಆಗಿದೆಯೋ? ಇಲ್ವೋ? ತಲೆಕೆಡಿಸಿಕೊಂಡಿದ್ದಾರೆ ವೈದ್ಯರು

ಲಂಡನ್: ವಿಶ್ವದ ಮೊದಲ ತಲೆ ಕಸಿ ಯಶಸ್ವಿಯಾಗಿದೆ ಎಂದು ಇಟಲಿಯ ಶಸ್ತ್ರಚಿಕಿತ್ಸಕರೊಬ್ಬರು ಘೋಷಿಸಿದ್ದು ಇದೀಗ ವೈದ್ಯಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇಟಲಿಯ ಟ್ಯುರಿನ್ ಅಡ್ವಾನ್ಸ್‍ಡ್ ನ್ಯೂರೋಮಾಡ್ಯುಲೇಷನ್ ಸಂಸ್ಥೆಯ ಸೆರ್ಜಿಯೋ ಕ್ಯಾನ್‍ವೆರೋ ಅವರು ಚೀನಾದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ  ಹೇಳಿಕೆ ನೀಡಿದ್ದಾರೆ. ಆದರೆ ವಿಶ್ವದಲ್ಲಿರುವ ಹಲವು ವೈದ್ಯರು ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಕ್ಯಾನ್‍ವೆರೋ ಹೇಳಿದ್ದು ಏನು?
ಚೀನಾದ ಹರ್ಬಿನ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 18 ಗಂಟೆಗಳ ಕಾಲ ನಡೆದ ತಲೆ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಮೆದುಳು ನಿಷ್ಕ್ರಿಯಗೊಂಡಿರುವ ವ್ಯಕ್ತಿಯ ತಲೆಯನ್ನು ಬೇರೊಬ್ಬ ವ್ಯಕ್ತಿಗೆ ಜೋಡಿಸಿದ್ದು, ಜೋಡಣೆಯಾದ ಬಳಿಕ ದೇಹದ ಬೆನ್ನೆಲುಬು, ನರಗಳು ಮತ್ತು ರಕ್ತ ನಾಳಗಳು ಯಶಸ್ವಿಯಾಗಿ ಕಾರ್ಯನಿರ್ವಹಣೆಯಾಗಿದೆ ಎಂದು ಹೇಳಿದ್ದಾರೆ.

ಸಾಧ್ಯವೇ ಇಲ್ಲ:
ಈ ಸಂಬಂಧವಾಗಿ ಇಂಗ್ಲೆಂಡಿನ ಕಾರ್ಡಿಫ್ ಮೆಡಿಕಲ್ ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕಾರದ ಡಿಯನ್ ಬರ್ನಟ್ ಎಂಬವರು ಗಾರ್ಡಿಯನ್‍ಗೆ ಲೇಖನ ಬರೆದಿದ್ದು, ತಲೆ ಕಸಿ ನಡೆಯಲು ಸಾಧ್ಯವೇ ಇಲ್ಲ. ದೇಹದ ಉಳಿದ ಅಂಗಾಗಳಂತೆ ತಲೆ ಅಲ್ಲ. ಇಬ್ಬರ ತಲೆ ಬೇರ್ಪಡಿಸಿದರೆ ರಕ್ತ ಪರಿಚಲನೆ ಹೇಗೆ ನಡೆಯುತ್ತದೆ? ಕ್ಯಾನ್‍ವೆರೋ ಅವರು ಮೆದುಳು ನಿಷ್ಕ್ರಿಯಗೊಂಡಿರುವ ವ್ಯಕ್ತಿಯ ತಲೆಯನ್ನು ಜೋಡಿಸಿರುವುದಾಗಿ ಹೇಳಿದ್ದಾರೆ. ಈಗಾಗಲೇ ನಿಷ್ಕ್ರಿಯಗೊಂಡಿರುವ ಮೆದಳು ಬೇರೆ ವ್ಯಕ್ತಿಯ ದೇಹದಲ್ಲಿ ಜೋಡಣೆಯಾದ ಬಳಿಕ ಚುರುಕಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ಕೆಲ ವೈದ್ಯರು ತಲೆ ಕಸಿ ನಡೆಯಲು ಸಾಧ್ಯವೇ ಇಲ್ಲ. ಕ್ಯಾನ್‍ವೆರೋ ಪ್ರಚಾರಕ್ಕಾಗಿ ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎನ್ನುವುದಕ್ಕೆ ಯಾವುದೇ ಪ್ರಬಲವಾದ ಸಾಕ್ಷ್ಯಗಳನ್ನು ನೀಡಿಲ್ಲ. ಹೀಗಾಗಿ ಈ ಶಸ್ತ್ರ ಚಿಕಿತ್ಸೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ಹೃದಯ ಕಸಿ, ಕಿಡ್ನಿ ಕಸಿ  ಮಾಡಿದಂತೆ ತಲೆ ಕಸಿಯನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ  ಎಂದು ಪ್ರತಿಕ್ರಿಯಿಸಿದ್ದಾರೆ.

 

Comments

Leave a Reply

Your email address will not be published. Required fields are marked *