ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ – ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸುಪ್ರೀಂ ನಕಾರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸಾಧ್ಯವಿಲ್ಲ, ಅರ್ಜಿಗಳ ವಿಚಾರಣೆ ನಡೆಸದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಹೇಗೆ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ವಕೀಲರನ್ನು ಪ್ರಶ್ನಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ 140ಕ್ಕೂ ಹೆಚ್ಚು ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾ. ಅಬ್ದುಲ್ ನಜೀರ್, ನ್ಯಾ. ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠ, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸುಳಿವು ನೀಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸಿಎಎಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಸಲ್ಲಿಕೆಯಾಗಿರುವ ಅರ್ಜಿಗಳು ಮಹತ್ವದ್ದಾಗಿದ್ದು ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದೆ. ಹೀಗಾಗಿ ಇದನ್ನು ಐದು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದರು.

ಸಿಎಎ ತಡೆ ಕೋರಿ ಮನವಿ ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಯಾವುದೇ ಕಾರಣಕ್ಕೂ ತಡೆ ನೀಡದಂತೆ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾ.ಎಸ್.ಎ.ಬೊಬ್ಡೆ, ಸಲ್ಲಿಕೆಯಾಗಿರುವ ಶೇ.99 ರಷ್ಟು ಅರ್ಜಿಗಳ ವಿಚಾರಣೆ ನಡೆಯಬೇಕು. ಕೇಂದ್ರ ಸರ್ಕಾರವೂ ಸೇರಿ ಎಲ್ಲ ಅರ್ಜಿದಾರರ ಅಭಿಪ್ರಾಯ ಪಡೆದುಕೊಳ್ಳಬೇಕು ಇದ್ಯಾವುದನ್ನು ಮಾಡದೇ ತಡೆ ನೀಡಲು ಸಾಧ್ಯವಿಲ್ಲ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. ಇದೇ ವೇಳೆ ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸಬಹುದು ಎಂದು ಅಭಿಪ್ರಾಯಪಟ್ಟರು.

ಒಬ್ಬರ ಪೌರತ್ವವನ್ನು ಅನುಮಾನಾಸ್ಪದವಾಗಿ ನೋಡುವುದು ತಪ್ಪು. ಈ ಪ್ರಕರಣದ ಕುರಿತು ತುರ್ತು ವಿಚಾರಣೆಯ ಉದ್ದೇಶವನ್ನು ಸುಪ್ರೀಂಕೋರ್ಟ್ ಮನಗಾಣಬೇಕು ಇದಕ್ಕಾಗಿ ಎನ್‍ಪಿಆರ್ ಮುಂದೂಡಬೇಕು ಎಂದು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ವಾದ ಮಂಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಎಲ್ಲ ಅರ್ಜಿಗಳು ಪೂರ್ಣಗೊಂಡರೆ ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಬಹುದು. ಕೇಂದ್ರ ಸರ್ಕಾರ ಅಭಿಪ್ರಾಯ ತಿಳಿಸಲು ನಾಲ್ಕು ವಾರಗಳ ಸಮಯ ಕೊಡಿ ಎಂದು ಮನವಿ ಮಾಡಿದರು. ವಾದ ಪರಿಗಣಿಸಿದ ಸುಪ್ರೀಂಕೋರ್ಟ್ ಪ್ರಕರಣದ ಎಲ್ಲ ಅರ್ಜಿದಾರರಿಗೂ ಅರ್ಜಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿ ನೋಟಿಸ್ ನೀಡಿದರು. ಅಭಿಪ್ರಾಯ ತಿಳಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರ ಮತ್ತು ಅಸ್ಸಾಂ ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.

Comments

Leave a Reply

Your email address will not be published. Required fields are marked *