ತೆರೆದ ಬಸ್‌ನಲ್ಲಿ RCB ಪರೇಡ್ ಇಲ್ಲ: ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ತೆರೆದ ಬಸ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ಇಲ್ಲ. ಆರ್‌ಸಿಬಿ ಆಟಗಾರರು ಬಸ್ಸಿನಲ್ಲಿ ಬಂದು ಬಸ್ಸಿನಲ್ಲಿ ಹೋಗುತ್ತಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸಂಜೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಗ್ರ‍್ಯಾಂಡ್ ಸ್ಟೆಪ್ ಬಳಿ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಗೃಹ ಇಲಾಖೆ ಒಪ್ಪದ ಕಾರಣ ಪರೇಡ್‌ಗೆ ಬ್ರೇಕ್ ಹಾಕಲಾಗಿದೆ. ಪೊಲೀಸ್ ಕಮೀಷನರ್ ಪರೇಡ್‌ಗೆ ಒಪ್ಪಿಲ್ಲ. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿಕ್ಟರಿ ಪರೇಡ್‌ಗೆ ಲಕ್ಷಾಂತರ ಜನರು ಸೇರುವುದರಿಂದ ನಿರ್ವಹಣೆ ಕಷ್ಟ. ನಗರದ ಹೃದಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಆಗಲಿದೆ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳಿವೆ. ಆದ್ದರಿಂದ ಸೂಕ್ತ ಭದ್ರತೆ ಕಷ್ಟ ಎಂದು ಪೊಲೀಸ್ ಇಲಾಖೆ ಹೇಳಿದೆ.