ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು

ನವದೆಹಲಿ: ನೋಟ್ ನಿಷೇಧದ ಬಳಿಕ ಆರ್‍ಬಿಐ ಬಿಡುಗಡೆ ಮಾಡಿರುವ 2,000ರೂ. ನೋಟನ್ನು ಹಿಂಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಅಂತಾ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸಚಿವರು ಈ ಬಗ್ಗೆ ಇಂದು ಲೋಕಸಭೆಗೆ ಲಿಖಿತ  ಉತ್ತರವನ್ನು ನೀಡಿದ್ದಾರೆ. ಕಳೆದ ವರ್ಷ ನವೆಂಬರ್ 9 ರಿಂದ 500 ಹಾಗೂ 1000 ರೂ. ನೋಟ್ ನಿಷೇಧಿಸಿದ ನಂತರ, ಡಿಸೆಂಬರ್ 10, 2016ರರವರೆಗೆ ಆರ್ ಬಿಐಗೆ ಒಟ್ಟು 12.44 ಲಕ್ಷ ಕೋಟಿ ರೂ. ಮೌಲ್ಯದ ನಿಷೇಧಿತ ನೋಟ್ ಗಳು ಜಮೆಯಾಗಿದೆ. ಬಳಿಕ ಜನವರಿ 27ರವರೆಗೆ ಒಟ್ಟು 9.921 ಲಕ್ಷ ಕೋಟಿ ಹಾಗೂ ಮಾರ್ಚ್ 3ರರವರೆಗೆ ಒಟ್ಟು 12 ಲಕ್ಷ ಕೋಟಿ ರೂ. ಮೌಲ್ಯದ 500 ಹಾಗೂ 2000 ರೂ. ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಜೇಟ್ಲಿ ಹೇಳಿದ್ದಾರೆ.

ದೇಶದಲ್ಲಿ ಕಪ್ಪುಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 8ರ ರಾತ್ರಿ ಏಕಾಏಕಿಯಾಗಿ 500ರೂ ಹಾಗೂ 1,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು. ಸರ್ಕಾರದ ಈ ನಿರ್ಧಾರದಿಂದಾಗಿ ಬ್ಯಾಂಕ್ ಡೆಪಾಸಿಟ್ ಹೆಚ್ಚಾಗಿದೆ ಎಂದು ಜೇಟ್ಲಿ ವಿವರಿಸಿದ್ದಾರೆ.

ನೋಟ್‍ಬ್ಯಾನ್ ಮಾಡಿದ ಬಳಿಕ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಕೇಂದ್ರ ಸರ್ಕಾರ 2 ಸಾವಿರ ರೂ. ನೋಟನ್ನು ಬ್ಯಾನ್ ಮಾಡುತ್ತಾರೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಇದೀಗ ಹಣಕಾಸು ಸಚಿವರು ಲಿಖಿತ ಉತ್ತರ ನೀಡುವ ಮೂಲಕ ಈ ವದಂತಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *