ಈ ವರ್ಷದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇರಲ್ಲ

ಬೆಂಗಳೂರು: ಈ ವರ್ಷದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಗೃಹಕಚೇರಿ ಕೃಷ್ಣದಲ್ಲಿ  ಗ್ರಾಮೀಣ ಶಕ್ತಿ ಆಯೋಗದ  ಜೊತೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾಧ್ಯಮಗಳ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಇಂಧನ ಬೇಡಿಕೆ ಶೇ.10 ರಷ್ಟು ಕಡಿಮೆಯಾಗಿದೆ. 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಿದ್ದು, 9 ಸಾವಿರ ಮೆ.ವ್ಯಾ. ವಿದ್ಯುತ್ ಬೇಡಿಕೆ ಇದೆ. ಹೀಗಾಗಿ ಈ ವರ್ಷದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂದು ಅವರು ತಿಳಿಸಿದರು.

ವಿದ್ಯುತ್ ಯೋಜನೆಗಳ ಅಭಿವೃದ್ಧಿ, ಜಾರಿಗೆ ನಡೆಸಲು ಸರ್ಕಾರ ಮುಂದಾಗುತ್ತಿದ್ದು, ಈ ಯೋಜನೆಗಳಿಗೆ ಅಧಿಕ ಬಂಡವಾಳ ಬೇಕಿದೆ. ಸ್ವಂತ ಬಂಡವಾಳದಿಂದ ಯೋಜನೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ನೆರವೂ ಕೂಡ ಅಗತ್ಯವಾದ ಹಿನ್ನೆಲೆಯಲ್ಲಿ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಶಿವನಸಮುದ್ರ, ಯಲಹಂಕ ಗ್ಯಾಸ್ ಪ್ರಾಜೆಕ್ಟ್, ಶರಾವತಿ ಪಂಪ್ ಸ್ಟೋರೇಜ್, ಕಪ್ಪತ ಗುಡ್ಡ, ವರಾಹಿ ಯೋಜನೆಗಳಿಗೆ 30 ಸಾವಿರ ಕೋಟಿ ರೂ. ಹಣ ಬೇಕಾಗುತ್ತದೆ. ಈ ಹಣಕ್ಕಾಗಿ 20 ಸಾವಿರ ಕೋಟಿ ಸಾಲ ಪಡೆಯಲು ಇಂದು ಕೇಂದ್ರ ಸರ್ಕಾರದ ಗ್ರಾಮೀಣ ವಿದ್ಯುತ್ ನಿಗಮ ನಿಯಮಿತದ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

ನಾನು ಎಸ್‍ಎಂ ಕೃಷ್ಣ ಅವರ ಜೊತೆ ಮಾತನಾಡಲು ಈಗ ಕಾಲ ಪಕ್ವವಾಗಿಲ್ಲ. ಕೃಷ್ಣ ರಾಜೀನಾಮೆ ಶಾಕ್ ನಿಂದ ನಾನಿನ್ನೂ ಹೊರಗೆ ಬಂದಿಲ್ಲ. ಎಲ್ಲರಿಗೂ ಕಾಂಗ್ರೆಸ್ ಧ್ವಜ ಸಿಗುವುದಿಲ್ಲ. ಪಕ್ಷದ ಕಾರ್ಯಕರ್ತರ ರಕ್ಷಣೆಗೆ ಬೆಂಬಲಕ್ಕೆ ನಾವು ಬದ್ಧವಾಗಿದ್ದು ಪಕ್ಷದ ಕಾರ್ಯಕರ್ತರು ವಿಚಲಿತರಾಗಬಾರದು ಎಂದು ತಿಳಿಸಿದರು.

ಎಚ್‍ಡಿಕೆಗೆ ತಿರುಗೇಟು: ಸದ್ಯದಲ್ಲೇ ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿ, ಎಚ್‍ಡಿಕೆ ಭವಿಷ್ಯ ನುಡಿಯಲು ಕಲಿತಿದ್ದಾರೆ. ದೇವೆಗೌಡರು ಹೇಳಿದರೆ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬಹುದು. ಕುಮಾರಸ್ವಾಮಿ ಯವರ ಮಾತು ಪರಿಗಣಿಸಲು ಆಗುತ್ತಾ? ನಮ್ಮದು ಕಂಚಿನ ಸರ್ಕಾರ, ಮಡಿಕೆ ಸರ್ಕಾರ ಅಲ್ಲ ಎಂದು ಹೇಳುವ ಮೀಲಕ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *