ವಿದ್ಯುತ್ ಸೌಕರ್ಯ ಇಲ್ಲದಿದ್ರೂ ಈ ಹಳ್ಳಿಯ ಜನ ಬಿಲ್ ಪಾವತಿ ಮಾಡಲೇಬೇಕು!

ಉತ್ತರಪ್ರದೇಶ: ಸಂಭಾಲ್ ಜಿಲ್ಲೆಯ ಕರೇಲಾ ಹಳ್ಳಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ವರ್ಷ ಕಳೆದರೂ ಜನರಿಗೆ ವಿದ್ಯುತ್ ಸಂಪರ್ಕ ದೊರೆತಿಲ್ಲ. ಕಂಬಗಳಿಗೆ ವಿದ್ಯುತ್ ಲೈನ್ ಜೋಡಣೆ ಮಾಡದ ಕಾರಣ ಗ್ರಾಮದಲ್ಲಿ ಇದುವರೆಗೂ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ವಿಚಿತ್ರವೆಂದ್ರೆ ವಿದ್ಯುತ್ ಸೌಲಭ್ಯ ಇಲ್ಲದಿದ್ದರು ಗ್ರಾಮದ ಜನ ಬಿಲ್ ಪಾವತಿ ಮಾಡಲೇಬೇಕಾಗಿದೆ.

ವಿದ್ಯುತ್ ಸಂಪರ್ಕಕ್ಕಾಗಿ ಹಲವಾರು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರು ಪ್ರಯೋಜನವಾಗಿಲ್ಲ. ಸಂಜೆ ಆಗುತ್ತಿದ್ದಂತೆ ಅಡುಗೆ ಮಾಡಲು, ಮಕ್ಕಳಿಗೆ ಓದಲು ಬಹಳ ತೊಂದರೆ ಆಗುತ್ತಿದೆ ಅಂತಾ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದಿದ್ದರು 40,000 ರಿಂದ 60,000 ರೂ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ ಇದು ಅನ್ಯಾಯ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ

ಸುಳ್ಳು ಭರವಸೆಗಳನ್ನು ನೀಡಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸರ್ಕಾರಗಳು ಕರೇಲಾ ಹಳ್ಳಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸದೆ ಮೋಸ ಮಾಡಿವೆ. ಬಿಎಸ್‍ಪಿ ಅಧಿಕಾರದಲ್ಲಿ ಇದ್ದಾಗ 15,000 ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿತ್ತು ಎಂದು ಬಿಎಸ್‍ಪಿ ಮಾಜಿ ಕೌನ್ಸಿಲರ್ ಗಿರೀಶ್ ಚಂದ್ರ ಆರೋಪಿಸಿದ್ದಾರೆ.

ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆ ಅಡಿಯಲ್ಲಿ ಬನಿಯಾಕೆರಾ ಬ್ಲಾಕ್ ಗೆ ವಿದ್ಯುತ್ ಒದಗಿಸಲು ಕಂಪೆನಿಗೆ ಪ್ರಾಜೆಕ್ಟ್ ನೀಡಿದ್ದೆವು ಕಾರಣಾಂತರಗಳಿಂದ ಮುಗಿಸಲು ಆಗಿಲ್ಲ. ಸೌಭಾಗ್ಯ ಯೋಜನೆ ಅಡಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಆ ಭಾಗದ ಮುಖ್ಯ ಇಂಜಿನಿಯರ್ ವಿನೋದ್ ಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *