ಆಪರೇಷನ್ ಇಲ್ಲದೇ ನ್ಯಾಚುರಲ್ ಆಗಿ ಮಗು ಹುಟ್ಟುತ್ತೆ: ಎ.ಮಂಜು

ಹಾಸನ: ಲೋಕಸಭಾ ಚುನಾವಣೆಯಲ್ಲಿ ಹಾಸನ ಜನರು ಈ ಬಾರಿ ಐತಿಹಾಸಿಕ ವಿಚಾರಕ್ಕೆ ನಾಂದಿ ಹಾಡಿದ್ದು, ಕುಟುಂಬ ರಾಜಕಾರಣದ ವಿರುದ್ಧ ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಆಪರೇಷನ್ ಕಮಲದ ಅಗತ್ಯವೇ ಇಲ್ಲದೆ ಮೈತ್ರಿ ಸರ್ಕಾರ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರ ನಿರೀಕ್ಷೆ. ಇದೇ ಅಭಿಪ್ರಾಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಂದಿದೆ. ಎನ್‍ಡಿಎ 300 ರಿಂದ 350 ಸ್ಥಾನ ಗೆಲ್ಲಲಿದೆ. ಈ 300 ಸ್ಥಾನದಲ್ಲಿ ಹಾಸನ ಕ್ಷೇತ್ರವೂ ಒಂದು ಸ್ಥಾನ ಸೇರಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಮಗೆ ಗೆಲುವು ಸಿಗಲಿದೆ ಎಂದರು.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಯಾವುದೇ ಕಾರಣದಿಂದ ಉಳಿಯಲ್ಲ. ನಮ್ಮ ಪಕ್ಷದ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲದೆಯೇ ಸರ್ಕಾರ ಉರುಳಲಿದೆ. ಈಗಾಗಲೇ ಹಲವು ಶಾಸಕರು ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲಾ, ಬಹುಶಃ ಆಪರೇಷನ್ ಇಲ್ಲದೆಯೇ ನ್ಯಾಚುರಲ್ ಆಗಿ ಮಗು ಹುಟ್ಟುತ್ತೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಆಗುತ್ತೆ ಎಂದು ಭವಿಷ್ಯ ನುಡಿದರು.

ಇದೇ ವೇಳೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ನೀಡುವ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ತನಿಖೆ ನಡೆದು ನ್ಯಾಯ ಸಿಗುವ ವಿಶ್ವಾಸ ಇದೆ. ಇದು ದೇಶದ ರಾಜಕೀಯ ಇತಿಹಾಸದಲ್ಲಿ ಗಮನ ಸೆಳೆಯುವ ವಿಚಾರವಾಗಲಿದೆ. ಜೆಡಿಎಸ್ ಅಭ್ಯರ್ಥಿ ಆಯೋಗಕ್ಕೆ ಸಲ್ಲಿಸದೇ ಇರುವ ಆದಾಯ ಮಾಹಿತಿಯನ್ನು ಪ್ರಶ್ನೆ ಮಾಡಿದ್ದೇವೆ. ಮತದಾರರಿಗೆ ಮೋಸ ಮಾಡಿ ಮತ ಹಾರಿಸಿಕೊಂಡಿರುವ ದೂರು ನೀಡಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *