ಸಂವಿಧಾನಾತ್ಮಕವಾದ ಗೌರವವಿಲ್ಲ, ಡಿಸಿಎಂ ಸ್ಥಾನಗಳೇ ಬೇಡ – ಯತ್ನಾಳ್

– ಕೈ ನಾಯಕರು ಪಾಕಿಸ್ತಾನದವರಿಗೆ ಹುಟ್ಟಿದಂತೆ ಮಾತನಾಡುತ್ತಿದ್ದಾರೆ

ವಿಜಯಪುರ: ಡಿಸಿಎಂ ಸ್ಥಾನಗಳನ್ನು ಕೈ ಬಿಡುವುದು ಒಳ್ಳೆಯದು. ಮುಖ್ಯಮಂತ್ರಿ ಒಬ್ಬರೇ ಸಾಕು, ಉಪ ಮುಖ್ಯಮಂತ್ರಿಗಳು ಬೇಡ. ಉಳಿದವರು ಮಂತ್ರಿಗಳಾಗಿ ಇರಲಿ, ಉಪಮುಖ್ಯಮಂತ್ರಿ ಏಕೆ ಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಯತ್ನಾಳ್, ಡಿಸಿಎಂ ಸ್ಥಾನಗಳೇ ಬೇಡ ಎಂದರು. ಅಲ್ಲದೇ ಡಿಸಿಎಂ ಸ್ಥಾನಕ್ಕೆ ಸಂವಿಧಾನಾತ್ಮಕವಾದ ಗೌರವ ಇಲ್ಲ. ಮುಖ್ಯಮಂತ್ರಿಗಳು ಸಮರ್ಥರಿದ್ದು, ಬಿಎಸ್‍ವೈ ನಾಯಕತ್ವದಲ್ಲಿ ಎಲ್ಲರೂ ಕೆಲಸ ಮಾಡಲಿ. ಮಂತ್ರಿಗಿರಿ ಏಕೆ ಬೇಕು? ಒಂದು ಗೂಟದ ಕಾರು ಹಾಗೂ ಪೈಲಟ್‍ಗಾಗಿ ಮಂತ್ರಿ ಬೇಡ ಎಂದು ಸಲಹೆ ನೀಡಿದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೆ ಸಿಎಂ ಸೂಕ್ತ ಸ್ಥಾನಮಾನ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ವಿಜಯಪುರದವರಿಗೆ ಇದೆ. ಸಚಿವ ಸ್ಥಾನ ಕೊಟ್ಟರೆ ನೋಡೋಣ ಎನ್ನುವ ಮೂಲಕ ಸಚಿವ ಸ್ಥಾನದ ರೇಸಿನಲ್ಲಿರುವುದನ್ನು ಸ್ಪಷ್ಟಪಡಿಸಿದರು. ಅಲ್ಲದೇ ಅಭಿವೃದ್ಧಿಗಾಗಿ ಜಿಲ್ಲೆಗೆ ಇಂದು ಸಾವಿರಾರು ಕೋಟಿ ಬರುತ್ತಿದೆ. ಜಿಲ್ಲೆ ಅಭಿವೃದ್ಧಿಯಾದರೆ ನನಗೆ ಅಷ್ಟೇ ಸಾಕು ಎಂದರು.

ರಾಷ್ಟ್ರೀಯ ನಾಯಕರು ಜಾರ್ಖಂಡ್ ಚುನಾವಣೆಯಲ್ಲಿ ತೊಡಗಿದ್ದಾರೆ. ಪರಿಣಾಮ ಸಚಿವ ಸಂಪುಟ ವಿಸ್ತರಣೆ ತಡವಾಗುತ್ತೆ. ಎರಡು ವಾರ ಎಲ್ಲರೂ ಕಾಯೋಣ ಎಂದರು. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐತಿಹಾಸಿಕ ಮಸೂದೆ ಪಾಸ್ ಮಾಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸೇರಿದಂತೆ ವಿವಿಧೆಡೆ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಂತಹವರಿಗೆ ಭಾರತದಲ್ಲಿ ಪೌರತ್ವ ಕೊಡುವ ಕೆಲಸ ಆಗಿದ್ದು, ಐತಿಹಾಸಿಕ ನಿರ್ಧಾರವಾಗಿದೆ. ಸಮಸ್ತ ಹಿಂದೂಗಳನ್ನು ಸಂರಕ್ಷಣೆ ಮಾಡುವ ಕೆಲಸ ಪ್ರಧಾನಿಗಳು ಸೇರಿದಂತೆ ನಾಯಕರು ಮಾಡಿದ್ದಾರೆ ಎಂದು ಧನ್ಯವಾದಗಳು ಸಲ್ಲಿಸಿದರು.

ಮಸೂದೆಯನ್ನ ವಿರೋಧ ಮಾಡುವ ಕಾಂಗ್ರೆಸ್ ನಾಯಕರು ಪಾಕಿಸ್ಥಾನದ ಏಜೆಂಟರು. ಅವರಿಗೇನಾದರೂ ನ್ಯಾಯ, ನೀತಿ ಎಂಬುವುದಿದ್ದರೆ ಇದಕ್ಕೆ ವಿರೋಧ ಮಾಡಬಾರದು. ಕಾಂಗ್ರೆಸ್ ನಾಯಕರು ಪಾಕಿಸ್ತಾನದವರಿಗೆ ಹುಟ್ಟಿದಂತೆ ಮಾತನಾಡುತ್ತಿದ್ದಾರೆ. ಇದು ದೇಶದ ದುರ್ದೈವವಾಗಿದೆ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *