ಡಿಸಿಎಂ ಸ್ಥಾನ ಅಗತ್ಯವಿಲ್ಲ, ತೆಗೆದುಹಾಕಬೇಕು: ರೇಣುಕಾಚಾರ್ಯ

– ಸಂಸದ ಪ್ರತಾಪ್ ಸಿಂಹಗೆ ಪರೋಕ್ಷ ಟಾಂಗ್

ದಾವಣಗೆರೆ: ರಾಜ್ಯದಲ್ಲಿ ಡಿಸಿಎಂ ಸ್ಥಾನ ಅವಶ್ಯಕತೆ ಇಲ್ಲಾ, ಏನಿದ್ದರೂ ಸಿಎಂ ಒಬ್ಬರೇ ಸಾಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಜಾತಿಗೆ ಸೀಮಿತವಾದ ಪಕ್ಷ ಅಲ್ಲ, ಈಗಾಗಲೇ ಮೂರು ಡಿಸಿಎಂ ಸ್ಥಾನಗಳನ್ನು ನೀಡಿದ್ದು ಗೊಂದಲಗಳು ಎದ್ದಿವೆ. ಆದ್ದರಿಂದ ಕೇವಲ ಸಿಎಂ ಅಷ್ಟೇ ಸಾಕು. ಯಾವುದೇ ಡಿಸಿಎಂ ಸ್ಥಾನ ಸೃಷ್ಟಿ ಮಾಡುವುದು ಬೇಡಾ, ಇದರಿಂದ ಕೇವಲ ಗೊಂದಲಗಳು ಆಗುತ್ತದೆ ಎನ್ನುವುದು ನಮ್ಮ ಅನಿಸಿಕೆ. ಕೇವಲ ಸಿಎಂ ಒಬ್ಬರೇ ಇದ್ದರೆ ಆಗ ಯಾವುದೇ ಮನಃಸ್ಥಾಪವಾಗುವುದಿಲ್ಲ ಎಂದರು.

ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಬೇರೆ ಬೇರೆ ಜಿಲ್ಲೆಗೆ ಅವಕಾಶ ಕೊಟ್ಟಿದ್ದಾರೆ. ಆದರೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗೆ ಅವಕಾಶ ಸಿಕ್ಕಿಲ್ಲ. ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ, ಮೂರು ಬಾರಿ ಶಾಸಕರಾಗಿದ್ದೇವೆ. ಯಾವುದೇ ಜವಾಬ್ದಾರಿ ನೀಡಿದರು ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡುತ್ತೇನೆ. ಆದರೆ ಸಚಿವ ಸ್ಥಾನಕ್ಕೆ ಹಾದಿಬೀದಿಯಲ್ಲಿ ಕೇಳುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರವಾಗಿದೆ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ, ಇನ್ನು ಮೂರುವರೆ ವರ್ಷ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂದರು.

ಸಂಸದ ಪ್ರತಾಪ್ ಸಿಂಹಗೆ ಟಾಂಗ್: ಇದೇ ವೇಳೆ ಉಪಚುನಾವಣೆಯಲ್ಲಿ 12 ಕ್ಷೇತ್ರ ಗೆದ್ದಿದ್ದು ಅಮಿತ್ ಶಾ ಹಾಗೂ ಮೋದಿಯ ವರ್ಚಸ್ಸಿನಿಂದ ಎಂಬ ಪ್ರತಾಪ್ ಸಿಂಹ ಹೇಳಿಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ ಅವರು, ಆ ಪುಣ್ಯಾತ್ಮ ಮೈಸೂರಿನಲ್ಲಿ ಬಿಎಸ್‍ವೈ ಎದುರು ಹಾಡಿಹೊಗಳಿದ್ದ. ಯಡಿಯೂರಪ್ಪ ಅವರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ. 15 ಕ್ಷೇತ್ರದ ಉಪಚುನಾವಣೆ ಪ್ರಚಾರ ನಡೆಸಿದ್ದಾರೆ. ಇದರಲ್ಲಿ 12 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮೋದಿ ಅಮಿತ್ ಶಾ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಈಗ ಅಮಿತ್ ಶಾ ಮೋದಿ ವರ್ಚಸ್ಸು ಎಂದು ಹೇಳಿಕೊಂಡಿದ್ದಾರೆ. ಈ ರೀತಿ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಉಂಟು ಮಾಡಬಾರದು ಎಂದು ಪರೋಕ್ಷವಾಗಿ ಹೆಸರು ಹೇಳದೆ ಟಾಂಗ್ ನೀಡಿದರು.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮನ್ನು ಸಾವರ್ಕರ್ ಅಲ್ಲ ರಾಹುಲ್ ಗಾಂಧಿ ಎಂದು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ರಾಜಕೀಯದಲ್ಲಿ ಬಚ್ಚಾ, ಅವರು ಸಾವರ್ಕರ್ ಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷ ನಾಯಕತ್ವವಿಲ್ಲದೆ ಸತ್ತು ಹೋಗಿದೆ. ಅಂತವರು ಸಾವರ್ಕರ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

Comments

Leave a Reply

Your email address will not be published. Required fields are marked *