ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ವಿರೋಧ ವ್ಯಕ್ತಪಡಿಸಿದ ಬಾಲಿವುಡ್ ಕಲಾವಿದರು!

ಮುಂಬೈ: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗಬೇಕು ಎಂದು ಸುಪ್ರಿಂ ಕೋರ್ಟ್ ಆದೇಶಿಸಿದೆ. ಆದರೆ ರಾಷ್ಟ್ರಗೀತೆ ಬಂದಾಗ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಹೀಗಿರುವಾಗ ಚಿತ್ರಮಂದಿರಗಳಲ್ಲಿ ಕೇಳಿ ಬರುವ ರಾಷ್ಟ್ರಗೀತೆಗೆ ಬಾಲಿವುಡ್ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಗೀತೆ ಬರುವಾಗ 30 ಸೆಕೆಂಡ್ ಎದ್ದು ನಿಂತು ನಮ್ಮ ದೇಶಕ್ಕೆ ಗೌರವ ಸಲ್ಲಿಸಿದ್ದರೆ ಅದು ನಮ್ಮ ಸ್ವಾತಂತ್ರ್ಯ ಹೇಗೆ ಕಿತ್ತುಕೊಳ್ಳುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಮಗೆ ಇಡೀ ದಿನ ಬಾಕಿಯಿದೆ ನಮಗೆ ಬೇಕಾದ ಕೆಲಸ ಮಾಡಿಕೊಳ್ಳಲು. ನಮ್ಮ ದೇಶಕ್ಕೆ ಚಿಕ್ಕ ಗೌರವ ಸಲ್ಲಿಸಲು ಜನರು ಯಾಕೆ ಇಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಗೊತ್ತಿಲ್ಲ ಎಂದು ಬಿಜೆಪಿ ವಕ್ತಾರೆ ಹಾಗೂ ಫ್ಯಾಷನ್ ಡಿಸೈನರ್ ಶೈನಾ ಎನ್.ಸಿ ತಿಳಿಸಿದ್ದಾರೆ.

ಎಲ್ಲರೂ ಸೇರಿ ರಾಷ್ಟ್ರಗೀತೆಗೆ ಗೌರವ ಕೊಡುವುದು ಒಳ್ಳೆಯದು. ಆದರೆ ಬಲವಂತವಾಗಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವ ಹಾಗೆ ಮಾಡಬಾರದು. ರಾಷ್ಟ್ರಗೀತೆ ಕಡ್ಡಾಯವಾಗಿ ಮಾಡುವುದರ ಮೂಲಕ ರಾಷ್ಟ್ರೀಯತೆ ಬೆಳೆಯುವುದಿಲ್ಲ. ಯಾರಾದರೂ ರಾಷ್ಟ್ರಗೀತೆಗೆ ಎದ್ದು ನಿಲ್ಲಲಿಲ್ಲ ಎಂದರೆ ಅವರಿಗೆ ರಾಷ್ಟ್ರಗೀತೆ ಮೇಲೆ ಗೌರವವಿಲ್ಲ ಎಂಬ ಅರ್ಥವಲ್ಲ. ಒತ್ತಾಯವಾಗಿ ಎದ್ದು ನಿಲ್ಲಿಸಿದರೆ ಎಲ್ಲರಿಗೂ ರಾಷ್ಟ್ರಗೀತೆ ಬಗ್ಗೆ ಗೌರವ ಇದೆ ಎಂಬ ಅರ್ಥವಲ್ಲ ಎಂದು ಹಿರಿಯ ನಟ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಗೋಲ್ ಮಾಲ್ ನಂತಹ ಸಿನಿಮಾ ನೋಡುವಾಗ ಜನರು ದೇಶಭಕ್ತಿ ಏಕೆ ತೋರಿಸಬೇಕು ಗೊತ್ತಿಲ್ಲ ಎಂದು ನಾಸೀರ್‍ವುದ್ದಿನ್ ಶಾ ತಿಳಿಸಿದ್ದಾರೆ.

ರಾಷ್ಟ್ರಗೀತೆಯೊಂದಿಗೆ ದಿನ ಆರಂಭಿಸಲು ಚಿತ್ರಮಂದಿರ ಶಾಲೆ ಅಲ್ಲ. ರಾಷ್ಟ್ರಗೀತೆಗೆ ಬಲವಂತವಾಗಿ ಎದ್ದು ನಿಲ್ಲಲು ಹೇಳಬಾರದು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ನಾನು ಎಷ್ಟೇ ದೂರವಿದ್ದರೂ ನನ್ನ ದೇಶಭಕ್ತಿ ಹಾಗೆಯೇ ಇರುತ್ತದೆ. ರಾಷ್ಟ್ರಗೀತೆ ಎಲ್ಲೇ ಕೇಳಿಸಿದರು ನಾನು ಎದ್ದು ನಿಲ್ಲುತ್ತೇನೆ ಎಂದು ವಿದ್ಯಾ ಬಾಲನ್ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

ನಾನು ಎಲ್ಲಾ ರಾಷ್ಟ್ರದ ರಾಷ್ಟ್ರಗೀತೆಯನ್ನು ಗೌರವಿಸುತ್ತೇನೆ. ಈ ಮೂಲಕ ಆ ರಾಷ್ಟ್ರ ಮತ್ತು ಆ ದೇಶದ ಜನರಿಗೆ ಗೌರವ ನೀಡುತ್ತೇನೆ. ಹಾಗಂತ ಚಿತ್ರಮಂದಿರ ಮತ್ತು ರೆಸ್ಟೋರೆಂಟ್ ಗಳಲ್ಲಿ ರಾಷ್ಟ್ರಗೀತೆ ಹೇಳಲು ಸೂಕ್ತ ಸ್ಥಳವಲ್ಲ ಎಂದು ಗಾಯಕ ಸೋನು ನಿಗಮ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *