ಚಿದಂಬರಂಗೆ ಕೊಂಚ ರಿಲೀಫ್ ಕೊಟ್ಟ ಸುಪ್ರೀಂ

ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದ ಸಂಬಂಧ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಕೊಂಚ ರಿಲೀಫ್ ಸಿಕ್ಕಿದೆ.

ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಕುರಿತ ಕುರಿತು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕಳುಹಿಸದಂತೆ ಮತ್ತು ಸಿಬಿಐ ಪ್ರಧಾನ ಕಚೇರಿಯಲ್ಲೇ ಗುರುವಾರದವರೆಗೆ ಇರಿಸಿಕೊಳ್ಳುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಚಿದಂಬರಂ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಮಧ್ಯಂತರ ಜಾಮೀನಿಗಾಗಿ ಚಿದಂಬರಂ ಕೋರಿಕೆಯನ್ನು ವಿಚಾರಣಾ ನ್ಯಾಯಾಲಯ ಸೋಮವಾರವೇ ಪರಿಗಣಿಸದಿದ್ದಲ್ಲಿ ಸಿಬಿಐ ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಾಧೀಶರಾದ ಆರ್.ಭಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ತಮ್ಮ ವಿರುದ್ಧ ಜಾರಿಗೊಳಿಸಲಾದ ಜಾಮೀನುರಹಿತ ವಾರಂಟ್ ಪ್ರಶ್ನಿಸಿ ಚಿದಂಬರಂ ಅವರು ಸಲ್ಲಿಸಿದ ಅರ್ಜಿಗೆ ಉತ್ತರಿಸುವಂತೆ ಸಿಬಿಐಗೆ ಸೂಚನೆ ನೀಡಿದೆ.

ಚಿದಂಬರಂ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ತಮ್ಮ ಕಕ್ಷಿದಾರರನ್ನು ಕಳೆದ 12 ದಿನಗಳಿಂದ ಸಿಬಿಐ ತನ್ನ ಕಸ್ಟಡಿಯಲ್ಲಿಟ್ಟುಕೊಂಡಿದೆ. ಅಷ್ಟೇ ಅವರನ್ನು ತಿಹಾರ್ ಜೈಲಿಗೆ ಯಾಕೆ ಕಳುಹಿಸಬೇಕು? ಸದ್ಯದ ಮಟ್ಟಿಗೆ ಅವರಿಗೆ ಗೃಹಬಂಧನ ನೀಡಿದರೆ ಸಾಕು ಎಂದು ಮನವಿ ಸಲ್ಲಿಸಿದರು. ಇದನ್ನು ಪುರಷ್ಕರಿಸಿದ ಸುಪ್ರೀಂ ಕೋರ್ಟ್, ಚಿದಂಬರಂ ಅವರನ್ನು ಜೈಲಿಗೆ ಕಳುಹಿಸದಂತೆ ಸೂಚನೆ ನೀಡಿದೆ.

Comments

Leave a Reply

Your email address will not be published. Required fields are marked *