ನನಗೆ ಸಾಕಾಗುವಷ್ಟು ದೊಡ್ಡ ಗ್ರೌಂಡ್ ಯಾವುದಿಲ್ಲ ಅನ್ನಿಸುತ್ತದೆ: ರಸೆಲ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ಬಳಿಕ ಮಾತನಾಡಿರುವ ರಸೆಲ್ ನನಗೆ ಸಾಕಾಗುವಷ್ಟು ದೊಡ್ಡದಾದ ಮೈದಾನ ಯಾವುದು ಇಲ್ಲ ಎಂದೆನಿಸುತ್ತದೆ ಎಂದು ತಿಳಿಸಿದ್ದಾರೆ.

ಪಂದ್ಯದಲ್ಲಿ ಒಂದು ಎಸೆತದಲ್ಲಿ 13 ರನ್ ಚಚ್ಚಿ ಗಮನ ಸೆಳೆದ ರಸೆಲ್, ಗೆಲುವು ಕಷ್ಟಸಾಧ್ಯ ಎನ್ನಲಾದ ಪಂದ್ಯದಲ್ಲಿ ಸಿಕ್ಸರ್ ಗಳ ಸುರಿಮಳೆ ಗೈದರು. 13 ಎಸೆತಗಳಲ್ಲಿ 48 ರನ್ ಗಳಿಸಿ 5 ಎಸೆತ ಬಾಕಿ ಇರುವಂತೆಯೇ ತಂಡಕ್ಕೆ ಗೆಲುವು ತಂದು ಕೊಟ್ಟರು. ಬಳಿಕ ಮಾತನಾಡಿ, ನಾನು ನನ್ನ ಸಾಮಥ್ರ್ಯ ಶಕ್ತಿಯ ಮೇಲೆ ನಂಬಿಕೆ ಇಡುತ್ತೇನೆ. ನನ್ನ ಬ್ಯಾಟ್ ಸ್ಪೀಡ್ ಉತ್ತಮವಾಗಿದೆ. ಕೆಲವು ಸಿಕ್ಸರ್ ಗಳು ಮೈದಾನದ ಸ್ಟ್ಯಾಂಡ್ ಮೇಲೆಗೂ ಹೋಗಿದ್ದು ನನಗೆ ಅಚ್ಚರಿ ತಂದಿತ್ತು. ನನ್ನ ಊಹೆ ಪ್ರಕಾರ ನನಗೆ ಸಾಕಾಗುವಷ್ಟು ದೊಡ್ಡ ಮೈದಾನಗಳಿಲ್ಲ ಎಂದಿದ್ದಾರೆ.

1 ಎಸೆತ 13 ರನ್: ರಸೆಲ್ ಬ್ಯಾಟಿಂಗ್ ಆಗಮಿಸಿದ ವೇಳೆ 16 ಎಸೆತಗಳಲ್ಲಿ 53 ರನ್ ಗಳಿಸಬೇಕಿತ್ತು. ಈ ವೇಳೆ ಮಹ್ಮದ್ ಸಿರಾಜ್ 17ನೇ ಓವರ್ ಎಸೆಯುವ ಅವಕಾಶ ಪಡೆದರು. ತಮ್ಮ ಅಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದ ರಸೆಲ್ ಓವರಿನ 3 ಎಸೆತವನ್ನು ಸಿಕ್ಸರ್ ಸಿಡಿಸಿದರು. ಆದರೆ ಅದನ್ನು ಅಂಪೈರ್ ನೋಬಾಲ್ ಎಂದು ತೀರ್ಪು ನೀಡಿದ್ದರು. ಪರಿಣಾಮ ನಾಯಕ ಕೊಹ್ಲಿ ಸಿರಾಜ್ ಬದಲು ಉಳಿದ 4 ಎಸೆತ ಬೌಲ್ ಮಾಡಲು ಸ್ಟೊಯಿನಿಸ್ ಗೆ ಅವಕಾಶ ನೀಡಿದರು. ಸಿಕ್ಕ ಫ್ರೀ ಹಿಟ್ ಅವಕಾಶವನ್ನ ಬಳಸಿಕೊಂಡ ರಸೆಲ್ ಅದನ್ನು ಸಿಕ್ಸರ್ ಗಟ್ಟಿದರು. ಇದರೊಂದಿಗೆ ಒಂದೇ ಎಸೆತದಲ್ಲಿ 13 ರನ್ ಲಭ್ಯವಾಯಿತು.

ಸ್ಟ್ರೈಕ್ ರೇಟ್: ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ರಸೆಲ್ ಇದುವರೆಗೂ ಆಡಿರುವ 77 ಎಸೆತಗಳಲ್ಲಿ 268.83ನ ಸ್ಟ್ರೈಕ್ ರೇಟ್ ನೊಂದಿಗೆ 207 ರನ್ ಸಿಡಿಸಿದ್ದಾರೆ. ಇದರಲ್ಲಿ 12 ಬೌಂಡರಿ, 22 ಸಿಕ್ಸರ್ ಗಳು ಸೇರಿವೆ.

ಶಾರುಖ್ ಮೆಚ್ಚುಗೆ: ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಗೆಲುವಿಗೆ ಕಾರಣರಾದ ರಸೆಲ್ ಅವರಿಗೆ ತಂಡದ ಫ್ರಾಂಚೈಸಿ ಆಗಿರುವ ಶಾರುಖ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ಬಾಹುಬಲಿ ಗೆಟಪ್ ನಲ್ಲಿರುವ ರಸೆಲ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಶಾರುಖ್ ರ ಈ ಟ್ವೀಟ್ಟಿಗೆ ಬಾಹುಬಲಿ ಸಿನಿಮಾದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಲಭಿಸಿದೆ. ಸದ್ಯ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿರುವ ಕೋಲ್ಕತ್ತಾ ತಂಡ 3 ರಲ್ಲಿ ಜಯ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ.

Comments

Leave a Reply

Your email address will not be published. Required fields are marked *