ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರದಿಂದ ಬಿಗ್ ಶಾಕ್

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಬಳಿಕ ರೈತರ ಬೇಡಿಕೆಗೆ ಮಣಿದು ಕೇಂದ್ರ ಸರ್ಕಾರ ಸಾಲಮನ್ನಾ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮೋದಿ ಸರ್ಕಾರ ನಿರಾಸೆ ಮಾಡಿದೆ. ಯಾವುದೇ ಕಾರಣಕ್ಕೂ ರೈತ ಸಾಲಮನ್ನಾ ಮಾಡಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಲಿಖಿತ ಹೇಳಿಕೆ ನೀಡಿದ್ದಾರೆ.

ಲೋಕಸಭಾ ಸದನದಲ್ಲಿ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ, ಸರ್ಕಾರ ರೈತರ ಆದಾಯ ಹೆಚ್ಚಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದ್ದರಿಂದ ರೈತರ ಸಾಲಮನ್ನಾ ಮಾಡುವುದು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಇದರಿಂದ ಬ್ಯಾಂಕ್‍ಗಳ ಮೇಲಿನ ಹೊರೆಯೂ ಹೆಚ್ಚಾಗುತ್ತದೆ. ಹೀಗಾಗಿ ರೈತರ ಸಾಲಮನ್ನಾ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಶಿವಸೇನೆಯ ಭವನ ಗವಾಲಿ ಪಾಟೀಲ್ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ರೈತರ ಸಾಲಮನ್ನಾ ಮಾಡಿದರೆ ಅವರು ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾರೆ. ಮತ್ತೆ ಮತ್ತೆ ಸಾಲಮನ್ನಾ ಮಾಡಲು ಬೇಡಿಕೆ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬೇಡಿಕೆಯನ್ನು ತಿರಸ್ಕರಿಸುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಇದರಿಂದಾಗಿ ಬ್ಯಾಂಕ್ ಮೇಲಿನ ಒತ್ತಡ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಪಂಚರಾಜ್ಯ ಚುನಾವಣೆ ಬಳಿಕ ಕೇಂದ್ರ ಸರ್ಕಾರ ಸಾಲಮನ್ನಾ ಮಾಡುತ್ತೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು, ಆದರೆ ಲೋಕಸಭಾ ಅಧಿವೇಶನದಲ್ಲೇ ಲಿಖಿತ ಹೇಳಿಕೆ ನೀಡಲಾಗಿದೆ. ಸದನದಲ್ಲಿ ಸ್ಪಷ್ಟ ಹೇಳಿಕೆ ನೀಡಿರುವ ಸರ್ಕಾರ ನಡೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೇಂದ್ರದಿಂದ ಸಾಲಮನ್ನಾ ನಿರೀಕ್ಷೆ ಹೊಂದಿರುವುದು ಬೇಡ ಎಂಬ ಸಂದೇಶವನ್ನು ರೈತರಿಗೆ ರವಾನೆ ಮಾಡಿದೆ.

ಇತ್ತ ರಾಜ್ಯ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಸಾಲಮನ್ನಾ ಯೋಜನೆ ಪ್ರಸ್ತಾಪ ಮಾಡಿ, ನಮ್ಮ ದಾರಿಗೆ ಬರಬೇಕು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *