ಕೊರೊನಾ ಭೀತಿಗೆ ಗ್ರಾಮಗಳಿಗೆ ದಿಗ್ಬಂಧನ- ಸಿಟಿ ಜನಕ್ಕೆ ನೋ ಎಂಟ್ರಿ

ರಾಯಚೂರು: ಇಡೀ ದೇಶವೇ ಲಾಕ್‍ಡೌನ್ ಆದರೂ, ಪೊಲೀಸರು ಲಾಠಿ ರುಚಿ ತೋರಿಸಿ ಓಡಿಸಿದರೂ ನಗರ ಪ್ರದೇಶದಲ್ಲಿ ಜನರ ಓಡಾಟ ಇನ್ನೂ ಸಂಪೂರ್ಣ ನಿಂತಿಲ್ಲ. ಆದರೆ ಜಿಲ್ಲೆಯ ಗ್ರಾಮೀಣ ಭಾಗದ ಜನ ಈಗ ಎಚ್ಚೆತ್ತುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ಕೊರೊನಾ ಭೀತಿಯಿಂದ ಊರಿಗೆ ಊರನ್ನೆ ಲಾಕ್ ಡೌನ್ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮಸ್ಥರಿಂದ ಇಡೀ ಗ್ರಾಮವೇ ಲಾಕ್ ಡೌನ್ ಆಗಿದೆ. ಊರಿನಿಂದ ಹೊರಗೆ ಹಾಗೂ ಒಳಗೆ ಯಾರು ಓಡಾಡದಂತೆ ರಸ್ತೆಗಳಿಗೆ ಬೇಲಿ ಹಾಕಲಾಗಿದೆ. ನಗರ ಪ್ರದೇಶದಿಂದ ಬರುವವರು ಬರಲೇಬೇಡಿ ಎಂದು ಜನ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. ಗ್ರಾಮದಲ್ಲಿರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದು ಜಾಗೃತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಇನ್ನೂ ಹೋಂ ಕೊರಂಟೈನ್ ಇರುವವರ ಮನೆಗಳಿಗೆ ಅಧಿಕಾರಿಗಳು ಬಿತ್ತಿ ಚಿತ್ರ ಅಂಟಿಸುತ್ತಿದ್ದಾರೆ. ನಾವು ಹೋಂ ಕೋರಂಟೈನ್ ನಲ್ಲಿದ್ದೇವೆ ಯಾರೂ ಮನೆಗೆ ಬರಬೇಡಿ ಎನ್ನುವ ಬಿತ್ತಿ ಚಿತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಇದುವೆರೆಗೆ ರಾಯಚೂರಲ್ಲಿ 625 ಜನ ಹೋಂ ಕೊರಂಟೈನ್ ನಲ್ಲಿದ್ದು ಅವರೆಲ್ಲರ ಮನೆಗಳಿಗೆ ಪೋಸ್ಟರ್‍ಗಳನ್ನು ಅಂಟಿಸಲಾಗುತ್ತಿದೆ.

148 ಜನ ವಿದೇಶದಿಂದ ಜಿಲ್ಲೆಗೆ ಬಂದಿದ್ದು, 7 ಶಂಕಿತರ ರಕ್ತ ಹಾಗೂ ಕಫಾ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಐದು ಪ್ರಕರಣಗಳು ನೆಗೆಟಿವ್ ಬಂದಿದ್ದು, ಎರಡು ಪ್ರಕರಣಗಳ ಮಾದರಿಗಳು ರೋಗಲಕ್ಷಣಗಳು ಇಲ್ಲದ ಹಿನ್ನಲೆ ತಿರಸ್ಕೃತವಾಗಿವೆ. ಸದ್ಯ ಶಂಕಿತ ವ್ಯಕ್ತಿಗಳ್ಯಾರು ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿಲ್ಲ.

Comments

Leave a Reply

Your email address will not be published. Required fields are marked *