-ಸ್ಮಶಾನದ ಪಕ್ಕ ಮನೆ ಇರೋದಕ್ಕೆ ಹೆಣ್ಣು ನೋಡೋಕೆ ಬಾರದ ವರ
-ಸುಟ್ಟ ಶವಗಳ ವಾಸನೆಗೆ ಮನೆಗಳನ್ನೆ ತೊರೆಯುತ್ತಿರುವ ಜನ
ಬೆಂಗಳೂರು: ವಧುವಾಗಲಿ, ವರನಾಗಲಿ ಬೆಂಗಳೂರಿಗೆ ಮದುವೆ ಮಾಡಿಕೊಟ್ಟರೆ ಆರಾಮಾಗಿ ಬದುಕುತ್ತಾರೆ ಅಂತ ಪೋಷಕರು ಅಂದುಕೊಳ್ಳುತ್ತಾರೆ. ಆದರೆ ಬೆಂಗಳೂರಿನ ಈ ಏರಿಯಾದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡಲು ಪೋಷಕರು ಪರದಾಡುತ್ತಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ಬಳಿಯ ನಂಜಾಂಬ ಅಗ್ರಹಾರಕ್ಕೆ ವಧು-ವರರನ್ನ ಕೊಡುತ್ತಲೇ ಇಲ್ಲವಂತೆ. ಅದಕ್ಕೆ ಕಾರಣ ಚಾಮರಾಜಪೇಟೆಯ ಹಿಂದೂ ರುದ್ರಭೂಮಿ. ಹೌದು, ಇಲ್ಲಿ ಮೃತದೇಹಗಳನ್ನು ಕಟ್ಟಿಗೆಯಿಂದ ಸುಡಲಾಗುತ್ತದೆ. ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿಲ್ಲ. ರುದ್ರಭೂಮಿಯ ಹಿಂದೆಯೇ ನಂಜಾಂಬ ಅಗ್ರಹಾರವಿದೆ. ಅಲ್ಲಿನ ಮನೆಗಳಿಗೆ ಬೂದಿ ಮಿಶ್ರಿತ ಹೊಗೆ ಬರುತ್ತಿದೆ. ಜೊತೆಗೆ ಮಕ್ಕಳಿಗೆ 8-10 ವರ್ಷಗಳಿಂದ ವಧು-ವರರನ್ನು ಪತ್ತೆ ಮಾಡಲಾಗದೇ ಪೋಷಕರು ಪರದಾಡುತ್ತಿದ್ದಾರೆ. ಇದನ್ನೂ ಓದಿ: 747 ವೆಬ್‌ಸೈಟ್, 94 ಯುಟ್ಯೂಬ್ ಚಾನೆಲ್‌ಗಳು ಬಂದ್

ಈ ಏರಿಯಾದಲ್ಲಿ ಮದುವೆ ಆಗುವವರಿಗೂ ಸಮಸ್ಯೆಯಾಗುತ್ತಿದೆ. ಯಾರೂ ಹೆಣ್ಣು ನೋಡುವುದಕ್ಕೆ ಬರುತ್ತಿಲ್ಲ. ಗಂಡಿನ ಮನೆಗೆ ಬಂದವರಿಗೂ ಸಂಬಂಧಗಳು ಕ್ಯಾನ್ಸಲ್ ಆಗುತ್ತಿವೆ. ಮೊದಲು ಮನೆ ಬೇರೆ ಮಾಡಿ ಆಮೇಲೆ ಹೆಣ್ಣು ನೋಡುವುದಕ್ಕೆ ಬರುತ್ತೇವೆ ಅಂತ ಗಂಡಿನ ಕಡೆಯವರು ಹೇಳುತ್ತಿದ್ದಾರೆ. ಹೀಗೇ ಆದರೆ ನಮ್ಮ ಹೆಣ್ಣು ಮಕ್ಕಳ ಗೋಳು ಕೇಳುವವರು ಯಾರು ಅಂತ ಸ್ಥಳೀಯರು ಬಿಬಿಎಂಪಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನ 8 ವಿದ್ಯಾರ್ಥಿಗಳ ವಿರುದ್ಧ ಫೋಕ್ಸೋ ಕೇಸ್
ಸುಟ್ಟ ಶವಗಳ ದಟ್ಟವಾಗ ಹೊಗೆ, ಹೊಗೆಯಿಂದ ಕಪ್ಪಾದ ಗೋಡೆ. ಎಲ್ಲಿ ನೋಡಿದರೂ ಖಾಲಿ ಇರುವ, ಟು ಲೇಟ್ ಬೋರ್ಡ್ ಮನೆಗಳು. ಹೌದು, ಚಾಮರಾಜಪೇಟೆಯ ವಾರ್ಡ್ ನಂಬರ್ 140, ನಜಾಂಬಾ ಅಗ್ರಹಾರದ ಹಲವು ಮನೆಗಳು ಖಾಲಿ, ಖಾಲಿಯಾಗಿವೆ. ಸ್ವಂತ ಮನೆ ಹೊಂದಿದವರು ಕೂಡ, ಬೇರೆ ಏರಿಯಾಗಳಿಗೆ ಹೋಗುತ್ತಿದ್ದಾರೆ. ಕಿಟಕಿಗಳಿಂದ ನೇರವಾಗಿ ಮನೆಗಳಿಗೆ ಈ ಕಪ್ಪಾದ ಹೊಗೆ ಬರುತ್ತಿದೆ. ವಾಸವಿರುವವರು ಬಾಡಿಗೆ ಮನೆಗಳನ್ನು ತೊರೆಯುತ್ತಿರುವುದರಿಂದ ಮನೆಗಳ ಮುಂದೆ ಟು ಲೆಟ್ ಬೋರ್ಡ್‍ಗಳು ನೇತಾಡುತ್ತಿವೆ. ಸುಮಾರು ತಿಂಗಳುಗಳಿಂದ ಮನೆ ಖಾಲಿ ಇದ್ದರೂ ಬಾಡಿಗೆಗೆ ಯಾರೂ ಬರುತ್ತಿಲ್ಲ. ಇನ್ನು ಮನೆಗಳಲ್ಲಿ ಕೂರಲಾಗದೇ, ಊಟ ಮಾಡಲಾಗದೇ, ಇಲ್ಲಿನ ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಒಟ್ಟಾರೆ ಹಲವು ವರ್ಷಗಳಿಂದ ಹೊಗೆ, ಬೂದಿ ಸಮಸ್ಯೆಯಿಂದ ಜನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ತಮ್ಮ ಮಕ್ಕಳಿಗೆ ಗಂಡು, ಹೆಣ್ಣು ಹುಡುಕಲಾಗದೇ ಪರದಾಡುತ್ತಿದ್ದಾರೆ.

Leave a Reply