ವರುಣಾರ್ಭಟಕ್ಕೆ ಬಿರುಕು ಬಿಟ್ಟ ನಿಜಾಮರ ಕಾಲದ ಸೇತುವೆ – ಇತ್ತ ಮಲೆನಾಡಲ್ಲಿ ನದಿಗಳಿಗೆ ಜೀವಕಳೆ

– ಅಲ್ಲಲ್ಲಿ ಭೂಕುಸಿತ, ರಸ್ತೆಗುರುಳಿದ ಮರಗಳು

ಚಿಕ್ಕಮಗಳೂರು/ಯಾದಗಿರಿ/ಶಿವಮೊಗ್ಗ: ರಾಜ್ಯದ ಕೆಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಮುಂಗಾರು ಅಬ್ಬರ ಜೋರಾಗಿದೆ. ಭಾರೀ ಮಳೆಯ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಯಾದಗಿರಿಯಲ್ಲಿ (Yadagiri) ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಭೀಮಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಪ್ರವಾಹದ ಭೀತಿ ಎದುರಾಗಿದೆ. ಈ ಮಧ್ಯೆ ಹೈದ್ರಾಬಾದ್ ನಿಜಾಮರ ಆಳ್ವಿಕೆ ಕಾಲಾವಧಿಯಲ್ಲಿ ನಿರ್ಮಾಣವಾಗಿದ್ದ ಸೇತುವೆ ಬಿರುಕು ಬಿಟ್ಟಿದೆ. ಯಾದಗಿರಿಯಿಂದ ಹೈದ್ರಾಬಾದ್‌ಗೆ ಸಂಪರ್ಕ ಕಲ್ಪಿಸುವ ಸುಮಾರು 1 ಕಿ.ಮೀ ವ್ಯಾಪ್ತಿಯ ಸೇತುವೆ ಇದಾಗಿದ್ದು, ಬಿರುಕಿನಿಂದ ಆತಂಕ ಎದುರಾಗಿದೆ.ಇದನ್ನೂ ಓದಿ: ಹಾಸನದಲ್ಲಿ ವರುಣನ ಅಬ್ಬರ – ಹೇಮಾವತಿ ಜಲಾಶಯಕ್ಕೆ 19,546 ಕ್ಯೂಸೆಕ್ ಒಳಹರಿವು

ಶಿವಮೊಗ್ಗದಲ್ಲಿ (Shivamogga) ಭಾರೀ ಮಳೆಗೆ ಭೂಕುಸಿತ ಉಂಟಾಗಿದೆ. ಹೊಸನಗರ ತಾಲೂಕಿನ ಕುಂದಗಲ್ ಗ್ರಾಮದಲ್ಲಿ ಸುಮಾರು 200ಮೀ.ನಷ್ಟು ಉದ್ದ, ಒಂದೂವರೆ ಅಡಿಯಷ್ಟು ಆಳ ಭೂಮಿ ಕುಸಿದಿದೆ. ಸಾಗರದ ಕರೂರು ಹೋಬಳಿಯ ಸುಳ್ಳಳ್ಳಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬಂದ್ ಆಗಿದೆ. ಇನ್ನೂ ಆಗುಂಬೆ ಚೆಕ್‌ಪೋಸ್ಟ್ ಬಳಿ ಬೃಹತ್ ಮರ ರಸ್ತೆಗುರುಳಿ, ಕೆಲಹೊತ್ತು ಜನ ಟ್ರಾಫಿಕ್‌ನಲ್ಲಿ ಪರದಾಡಿದರು.

ಮಲೆನಾಡಿನಲ್ಲಿ ನಿರಂತರ ಮಳೆಯಿಂದ ತುಂಗ-ಭದ್ರಾ-ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಘಟ್ಟ ಪ್ರದೇಶದಲ್ಲಿ ಮಳೆಯಿಂದ ಜಲಪಾತಗಳಿಗೆ ಜೀವಕಳೆ ಬಂದಿದೆ. ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು, ಕುಟುಂಬ ಪಾರಾಗಿದೆ. ತರೀಕೆರೆ ತಾಲೂಕಿನ ಪ್ರವಾಸಿತಾಣ ಕಲ್ಲತ್ತಿಗರಿಯಲ್ಲಿ ನಿಲ್ಲಿಸಿದ ಓಮಿನಿ ಮೇಲೆ ಬೃಹತ್ ಮರ ಬಿದ್ದು ಜಖಂಗೊಂಡಿದೆ.ಇದನ್ನೂ ಓದಿ: ಮಳೆ ಆರ್ಭಟಕ್ಕೆ ಮಂಜಿನ ನಗರಿ ಥಂಡಾ – ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ