ದೇವೇಗೌಡರನ್ನ ಹಾಡಿಹೊಗಳಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು

ಮಂಡ್ಯ: ರಾಜಕೀಯವನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನ ವರಿಷ್ಠ ಅಧಿಕಾರಿ ದೇವೇಗೌಡರು ಆಧುನಿಕ ಕಾಲದಲ್ಲಿ ನಮ್ಮ ಸಮುದಾಯದ ಕಣ್ಣು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ದೇವೇಗೌಡರನ್ನು ಹಾಡಿಹೊಗಳಿದ್ದಾರೆ.

ಕೆಂಪೇಗೌಡ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸುವ ಸಲುವಾಗಿ ಆದಿಚುಂಚನಗಿರಿಯಲ್ಲಿ ಭಾನುವಾರ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಸಾಮಾಜಿಕ ಹರಿಕಾರನಾಗಿ ಕೆಂಪೇಗೌಡ, ಆಧ್ಯಾತ್ಮಿಕ ನೆಲೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ, ಸಾಹಿತ್ಯವಲಯದಲ್ಲಿ ಕುವೆಂಪು ಐಕಾನ್ ಆಗಿದ್ದಾರೆ. ಅವರೆಲ್ಲ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅದೇ ರೀತಿ ಆಧುನಿಕ ಯುಗದಲ್ಲಿ ದೇವೇಗೌಡರು ಸಮುದಾಯದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಯಾರು ಯಾವ ಪಾರ್ಟಿಯಲ್ಲಿ ಯಾರು ಎಷ್ಟು ದಿನ ಇರುತ್ತಾರೋ ಖಂಡಿತ ಗೊತ್ತಿರುವುದಿಲ್ಲ. ನಿನ್ನೆ ಯಾವುದೋ ಒಂದು ಪಾರ್ಟಿಯಲ್ಲಿ ಇರುತ್ತಾರೆ. ನಾಳೆ ಇನ್ನೊಂದು ಪಾರ್ಟಿಯಲ್ಲಿ ಇರುತ್ತಾರೆ. ಪಾರ್ಟಿಗಳು ಬದಲಾದ ತಕ್ಷಣ ಅವರವರ ಫಿಲಾಸಫಿಗಳು ಬದಲಾಗುತ್ತದೆ. ಎಲ್ಲ ರಾಜಕೀಯ ಐಡೆಂಟಿಫಿಕೇಷನ್ ಪಕ್ಕಕ್ಕಿಟ್ಟು ಯೋಚನೆ ಮಾಡೋದಾದರೆ, ಯಾವ ಪಾಸಿಟಿವ್ ನೆಗೆಟಿವ್ ಭಾವನೆಯಿಲ್ಲದೆ ಸಮುದಾಯದ ಜವಾಬ್ದಾರಿ ಹೊತ್ತಿರುವ ವ್ಯಕ್ತಿಯ ಬಗ್ಗೆ ಹೇಳೋದಾದ್ರೆ, ಇವತ್ತಿನ ಆಧುನಿಕ ಯುಗದಲ್ಲಿ ದೇವೇಗೌಡರು ಕೆಲಸ ಮಾಡುತ್ತಿದ್ದಾರೆ.

ಈ ಹೆಸರು ಹೇಳಿದ ತಕ್ಷಣ ಕೆಲವೊಂದು ಜನ ಮೂಗುಮುರಿಯಲು ಅವಕಾಶವಿದೆ. ಕೆಲಕಾಲ ಜೊತೆಯಲ್ಲಿದ್ದು ಅವಕಾಶ ವಂಚಿತರಾಗಿ ಆಚೆಗೆ ಹೋದ ತಕ್ಷಣ ದೇವೇಗೌಡರು ಬೇಕಾಗುತ್ತಾರೆ, ಬೇಡ ಎಂಬ ಪ್ರಶ್ನೆ ಅಲ್ಲ ಇದು. ರಾಜಕೀಯವನ್ನು ಪಕ್ಕಕ್ಕಿಟ್ಟು ಸಮುದಾಯ ಮತ್ತು ಸಮಾಜದ ಒಳಿತಿಗೆ ನಿಷ್ಪಕ್ಷಪಾತವಾಗಿ ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸಬೇಕು ಎಂದು ಹೇಳುವ ಮೂಲಕ ಒಳ್ಳೆಯ ಕೆಲಸವನ್ನು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸ್ವೀಕರಿಸಬೇಕು ಎಂಬ ಸಂದೇಶ ನೀಡಿದ್ದಾರೆ.

ಇನ್ನು ಸಭೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡರ ಹೆಸರಿಡಬೇಕು, ನಮ್ಮ ಮೆಟ್ರೋ ಬದಲು ಕೆಂಪೇಗೌಡ ಮೆಟ್ರೋ ಎಂದು ಬದಲಾಯಿಸಬೇಕು, ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಕೆಂಪೇಗೌಡ ಕಲಾಕ್ಷೇತ್ರ ಸ್ಥಾಪಿಸುವುದು, ಅಂತರ್ಜಾಲದಲ್ಲಿ ಕೆಂಪೇಗೌಡರ ಬಗ್ಗೆ ಮಾಹಿತಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ವಿಚಾರಗಳನ್ನು ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರು ಸರ್ಕಾರದ ಗಮನಕ್ಕೆ ತಂದು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮಿತಿ ರಚಿಸಬೇಕು ಎಂದು ನಿರ್ಮಲಾನಂದನಾಥಸ್ವಾಮೀಜಿ ಸಲಹೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *