ಚೀನಾ ಸೈನಿಕರಿಗೆ ನಮಸ್ಕಾರದ ಅರ್ಥ ತಿಳಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಡಿ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಭಾರತೀಯ ನಮಸ್ಕಾರದ ಅರ್ಥವನ್ನು ತಿಳಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಭಾರತ ಮತ್ತು ಚೀನಾ ಗಡಿ ಪ್ರದೇಶದ ನಾಥುಲಾ ದಲ್ಲಿ ಭಾನುವಾರ ಇಂಡೋ-ಟಿಬೆಟಿಯನ್ ಸೈನಿಕರನ್ನು ಭೇಟಿ ಮಾಡಿದ್ದ ರಕ್ಷಣಾ ಸಚಿವರು ತಮ್ಮ ಭೇಟಿಯ ಕುರಿತು ಟ್ವಿಟ್ಟರ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು. ನಂತರ ಸೇನಾ ಅಧಿಕಾರಿಗಳೊಂದಿಗೆ ತೆರಳಿ ಚೀನಾ ಸೈನಿಕರನ್ನು ಭೇಟಿ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ರಕ್ಷಣಾ ಸಚಿವರು ಚೀನಿ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದು, ಆ ವೇಳೆ ಭಾರತೀಯ ನಮಸ್ಕಾರದ ಮಹತ್ವವನ್ನು ತಿಳಿ ಹೇಳಿದ್ದಾರೆ. ಈ ವಿಡಿಯೋವನ್ನು ಸ್ವತಃ ರಕ್ಷಣಾ ಸಚಿವರೇ ಟ್ವೀಟ್ ಮಾಡಿದ್ದಾರೆ. ಲಾಥುಲಾ ಗಡಿಯನ್ನು ಭೇಟಿ ಮಾಡಿದ ವೇಳೆ ಚೀನಿ ಸೈನಿಕರು ಸತತವಾಗಿ ತನ್ನ ಫೋಟೋಗಳನ್ನು ತೆಗೆಯುತ್ತಿದ್ದರು ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ಇಂಡೋ-ಚೀನಾ ಗಡಿಯಲ್ಲಿ ಕೈಗೊಂಡಿರುವ ರಕ್ಷಣಾ ಕಾರ್ಯಗಳನ್ನು ವೀಕ್ಷಿಸಲು ಸಚಿವೆ ಸೀತಾರಾಮನ್ ತೆರಳಿದ್ದರು. ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ತನ್ನ ಸೈನಿಕರನ್ನು ಹಿಂಪಡೆದಿಲ್ಲ ಎಂಬ ಸಂಗತಿಯನ್ನು ಭಾರತೀಯ ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಗಡಿ ಪ್ರದೇಶಕ್ಕೆ ಭೇಟಿ ನೀಡಲಾಗಿದೆ. ಈ ಹಿಂದೆ ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ನಿರ್ಮಿಸಿಸುತ್ತಿದ್ದ ರಸ್ತೆಯ ವಿರೋಧಿಸಿ ಭಾರತೀಯ ಸೈನಿಕರು ಹಾಗೂ ಚೀನಿ ಪಡೆಗೆ ಸಂಘರ್ಷ ಉಂಟಾಗಿತ್ತು. ಈ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ ಚೀನಾ ಮತ್ತೆ ರಸ್ತೆಯನ್ನು ನಿರ್ಮಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಹಾಗಿದ್ದರೂ ಡೋಕ್ಲಾಂ ಪ್ರದೇಶದಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *