ಬ್ಯಾಂಕುಗಳ ಶೋಚನೀಯ ಪರಿಸ್ಥಿತಿಗೆ ಮನಮೋಹನ್ ಸಿಂಗ್, ರಘುರಾಂ ರಾಜನ್ ಕಾರಣ – ಸೀತಾರಾಮನ್

ನ್ಯೂಯಾರ್ಕ್: ಆರ್.ಬಿ.ಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ದೇಶದ ಬ್ಯಾಂಕ್‍ಗಳ ಶೋಚನೀಯ ಸ್ಥಿತಿಗೆ ಕಾರಣ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗ ಭಾರತದ ಆರ್ಥಿಕ ನೀತಿ ವಿಚಾರದ ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಉಪನ್ಯಾಸ ನೀಡಿದರು.

ಈ ವೇಳೆ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವಧಿಯಲ್ಲಿ ಬ್ಯಾಂಕ್‍ಗಳು ದುಸ್ಥಿತಿಗೆ ತಲುಪಿತ್ತು. ಈಗ ನಮ್ಮ ಸರ್ಕಾರ ಬ್ಯಾಂಕ್‍ಗಳಿಗೆ ಜೀವ ನೀಡಿ ಹೊಸ ಚೈತನ್ಯ ನೀಡುತ್ತಿದೆ ಎಂದು ತಿಳಿಸಿದರು.

ಭಾರತದ ಆರ್ಥಿಕತೆ ಕುಸಿತಕ್ಕೆ ಮೋದಿ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ರಘುರಾಮ್ ರಾಜನ್ ಮತ್ತು ಮನಮೋಹನ್ ಸಿಂಗ್ ದೂರಿದ್ದರು. ಈಗ ನಿರ್ಮಲಾ ಸೀತರಾಮನ್ ಇವರ ವಿರುದ್ಧವೇ ಗಂಭೀರ ಆರೋಪ ಮಾಡಿ ಬ್ಯಾಂಕ್‍ಗಳು ದುಸ್ಥಿತಿಗೆ ನೀವೇ ಹೊಣೆ ಎಂದು ದೂರಿ ತಿರುಗೇಟು ನೀಡಿದರು.

ಆರ್ಥಿಕ ತಜ್ಞರಾಗಿರುವ ರಘುರಾಮ್ ರಾಜನ್ ಮೇಲೆ ನನಗೆ ನನಗೆ ಬಹಳ ಗೌರವವಿದೆ. ದೇಶದ ಆರ್ಥಿಕತೆ ಸದೃಢವಾಗಿದ್ದಾಗ ಅವರು ಆರ್.ಬಿ.ಐ ಗವರ್ನರ್ ಆಗಿದ್ದರು. ರಾಜನ್ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳು ಒಂದು ಫೋನ್ ಕರೆ ಮಾಡಿದರೆ ಸಾಕು ಸಾಲ ಮಂಜೂರಾಗುತಿತ್ತು. ಇದರಿಂದ ಸೃಷ್ಟಿಯಾದ ಸಮಸ್ಯೆಯಿಂದ ಪಾರಾಗಲು ಸಾರ್ವಜನಿಕ ರಂಗದ ಬ್ಯಾಂಕುಗಳು ಸರ್ಕಾರದ ಷೇರುಗಳನ್ನು ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಮಾಹಿತಿ ನೀಡಿದರು.

ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಈ ವಿಚಾರ ಹೇಳುತ್ತಿಲ್ಲ. ಮನಮೋಹನ್ ಸಿಂಗ್ ಮತ್ತು ರಾಜನ್ ಅವರಿದ್ದ ಸಮಯದಲ್ಲಿ ಬ್ಯಾಂಕುಗಳು ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಆ ಸಂದರ್ಭದಲ್ಲಿ ನಮಗೆ ಈ ವಿಚಾರಗಳು ತಿಳಿಯುತ್ತಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ 2012-13 ರಲ್ಲಿ ಸಾರ್ವಜನಿಕ ರಂಗದ ಕೆಟ್ಟ ಸಾಲದ ಪ್ರಮಾಣ 9,190 ಕೋಟಿ ಇದ್ದರೆ 2013-14ರ ವೇಳೆಗೆ ಇದು 2.16 ಲಕ್ಷ ಕೋಟಿಗೆ ಏರಿಕೆಯಾಗಿತ್ತು.

Comments

Leave a Reply

Your email address will not be published. Required fields are marked *