ನಿರ್ಭಯಾ ಅತ್ಯಾಚಾರ ಪ್ರಕರಣ – ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬಿಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಇಂದು ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.

ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಮಧ್ಯಾಹ್ನ ಎರಡು ಗಂಟೆಗೆ ವಿಚಾರಣೆ ನಡೆಸಲಿದ್ದು, ತೀರ್ಪು ಪರಿಶೀಲಿಸುವ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಿದೆ.

ದಿಶಾ ಅತ್ಯಾಚಾರಿಗಳು ಎನ್‍ಕೌಂಟರ್ ಆದ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕು ಎನ್ನುವ ಒತ್ತಡಗಳು ಕೇಳಿ ಬಂದಿತ್ತು. ಇದರ ಬೆನ್ನೆಲೆ ತಿಹಾರ್ ಜೈಲಿನ ಸಿಬ್ಬಂದಿ ಕೂಡ ಗಲ್ಲು ಶಿಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಈ ತಯಾರಿ ಬೆನ್ನೆಲೆ ಅಪರಾಧಿ ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ.

ವೇದ, ಪುರಾಣ, ಉಪನಿಷತ್‍ಗಳಲ್ಲಿ ಉಲ್ಲೇಖಿಸಿರುವಂತೆ ಮನುಷ್ಯನ ಆಯಸ್ಸು ಸತ್ಯಯುಗ ಮತ್ತು ತೇತ್ರಾಯುಗದಲ್ಲಿ ಜನರು ಸಾವಿರ ವರ್ಷ, ದ್ವಾಪರ ಯುಗದಲ್ಲಿ ನೂರು ಹಾಗೂ ಕಲಿಯುಗದಲ್ಲಿ 50-60 ವರ್ಷ ಬದುಕುತ್ತಿದ್ದರು. ಆದರೆ ದೆಹಲಿಯಲ್ಲಿರುವ ನಾವು ಮಾಲಿನ್ಯ, ಕಲುಷಿತ ನೀರು, ಗ್ಯಾಸ್ ಚೇಂಬರ್ ನಂತಹ ಗಾಳಿ ಸೇವನೆಯಿಂದ ಆಯಸ್ಸು ಕ್ಷೀಣಿಸುತ್ತಿದೆ. ಹೀಗಾಗಿ ನಮ್ಮಗೆ ಏಕೆ ಗಲ್ಲು ಶಿಕ್ಷೆ ಎಂದು ಠಾಕೂರ್ ಪ್ರಶ್ನಿಸಿದ್ದನು. ಅಲ್ಲದೇ ಬಡವ ಅಥವಾ ಅಸಹಾಯಕನನ್ನು ಶಿಕ್ಷಿಸುವ ಮುನ್ನ ಯೋಚಿಸಿ ಎಂದು ಗಾಂಧಿ ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ಹಿಂದೆ ನೀಡಿದ್ದ ತೀರ್ಪು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾನೆ.

ಈ ಹಿಂದೆ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದ ಗಲ್ಲು ಶಿಕ್ಷೆ ಆದೇಶವನ್ನು ಪುನರ್ ಪರಿಶೀಲನೆ ಮಾಡುವಂತೆ ಹಿಂದೆ ಪ್ರಕರಣ ಬಾಕಿ ಮೂವರು ಅಪರಾಧಿಗಳಾದ ಮುಖೇಶ್, ಪವನ್ ಕುಮಾರ್ ಗುಪ್ತಾ ಮತ್ತು ವಿನಯ್ ಶರ್ಮಾ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈಗಾಗಲೇ ಕ್ಷಮದಾನ ಅರ್ಜಿ ತಿರಸ್ಕರಿಸಿದ ಹಿನ್ನೆಲೆ ಅಕ್ಷಯ್ ಠಾಕೂರ್ ಸಲ್ಲಿಸಿರುವ ಕಡೆಯ ಅರ್ಜಿ ಈಗ ಮಹತ್ವ ಪಡೆದುಕೊಂಡಿದೆ.

ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸುತ್ತಿದ್ದಂತೆ ಇತ್ತ ಸಂತ್ರಸ್ಥೆಯ ತಾಯಿ ಆಶಾದೇವಿ ಸುಪ್ರೀಂಕೋರ್ಟ್‌ನ ಮೆನ್ಶನ್ ಮಾಡಿದ್ರೆ, ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಅವರು ಮನವಿ ಮಾಡಿದ್ದಾರೆ. ಆದರೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದ್ದ ಹಿನ್ನೆಲೆ ಡಿಸೆಂಬರ್ 18ಕ್ಕೆ ವಿಚಾರಣೆ ನಡೆಸುವುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಹೇಳಿದ್ದಾರೆ. ಅಲ್ಲದೇ ಅರ್ಜಿದಾರರ ಕಾನೂನು ಹೋರಾಟದ ಅವಕಾಶಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಹೀಗಾಗಿ ಇಂದು ಸವೋಚ್ಛ ನ್ಯಾಯಾಲಯ ತೆಗೆದುಕೊಳ್ಳುವ ನಿರ್ಧಾರ ಮೇಲೆ ಎಲ್ಲವೂ ಅವಲಂಬಿತವಾಗಿದ್ದು ಅಕ್ಷಯ್ ಠಾಕೂರ್ ಅರ್ಜಿಯನ್ನು ಪರಿಗಣಿಸುತ್ತಾ ಅಥವಾ ತಿರಸ್ಕರಿಸುತ್ತಾ ಎನ್ನುವುದು ಮಧ್ಯಾಹ್ನ ಗೊತ್ತಾಗಲಿದೆ.

Comments

Leave a Reply

Your email address will not be published. Required fields are marked *