ಸಾವಿನ ಕಡೆಯ ದಿನವೂ ನಿರ್ಭಯಾ ಅತ್ಯಾಚಾರಿಗಳಿಂದ ಕಾನೂನು ಹೋರಾಟ

ನವದೆಹಲಿ: ನಾಲ್ಕನೇ ಬಾರಿ ಸಾವಿನ ಬಾಗಿಲಲ್ಲಿ ನಿಂತಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳು ನೇಣಿಗೆ ಕೊರೊಳುಡ್ಡುವ ಕಡೆಯ ಕ್ಷಣದ ವರೆಗೂ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ.

ಮಾರ್ಚ್ 20ರ ಬೆಳಗ್ಗೆ 5:30ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ದೆಹಲಿಯ ಪಟಿಯಾಲ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ನಾಳೆ ಈ ಅರ್ಜಿ ವಿಚಾರಣೆಗೆ ಬರಲಿದೆ. ಇಂದು ಅರ್ಜಿ ಸಲ್ಲಿಸಿರುವ ನಾಲ್ವರು ದೋಷಿಗಳು ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ನಾಲ್ವರು ದೋಷಿಗಳ ಕಾನೂನು ಹೋರಾಟ ಬಾಕಿ ಉಳಿದಿದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಕ್ಷಮಾದಾನ ಅರ್ಜಿ ವಜಾ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ಇನ್ನು ಬಾಕಿ ಇದ್ದು, ಈ ಅರ್ಜಿ ಇತ್ಯರ್ಥವಾಗಬೇಕಿದೆ. ಘಟನೆ ನಡೆದ ವೇಳೆ ಬಾಲಾಪರಾಧಿಯಾಗಿದ್ದೆ. ಹೀಗಾಗಿ ಶಿಕ್ಷೆ ಕಡಿತಗೊಳಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಕ್ಯುರೆಟಿವ್ ಅರ್ಜಿ ಬಾಕಿ ಇದೆ. ಅಲ್ಲದೆ ತಿಹಾರ್ ಜೈಲು ಸಿಬ್ಬಂದಿ ಥಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಬೇಕಿದ್ದು, ಈ ವೇಳೆ ಗಲ್ಲು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ ಎಂದು ದೋಷಿ ಪವನ್ ಗುಪ್ತಾ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.

ಪ್ರಕರಣದ ಮತ್ತೊರ್ವ ಆರೋಪಿ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ನೀಡುವಂತೆ ಬಿಹಾರದಲ್ಲಿ ಕೊರ್ಟ್ ಮೊರೆ ಹೋಗಿದ್ದು, ಅದರ ವಿಚಾರಣೆ ಸಹ ನಡೆಬೇಕಿದೆ. ಇನ್ನು ವಿನಯ್ ಶರ್ಮಾ ತನ್ನ ಕ್ಷಮದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕುರಿತು ವಿಚಾರಣೆ ನಡೆಬೇಕಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

ಇಷ್ಟು ಮಾತ್ರವಲ್ಲದೆ ಮೂವರು ದೋಷಿಗಳು ಅಂತರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಈ ಎಲ್ಲ ಪ್ರಕರಣಗಳು ವಿಚಾರಣೆ ನಡೆಯಬೇಕಿದ್ದು, ಇದಕ್ಕೂ ಮುನ್ನ ಅಪರಾಧಿಗಳನ್ನು ಶಿಕ್ಷಿಸುವುದು ಸರಿಯಲ್ಲ ಎಂದು ವಕೀಲ ಎ.ಪಿ.ಸಿಂಗ್ ಪಟಿಯಾಲ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದಾರೆ.

ಗುರುವಾರ ಈ ಅರ್ಜಿ ನ್ಯಾ.ಧರ್ಮೇಂದ್ರ ರಾಣಾ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಈಗಾಗಲೇ ನಾಲ್ಕು ಬಾರಿ ಜೀವದಾನ ಸಿಕ್ಕಿರುವ ನಾಲ್ವರು ದೋಷಿಗಳಿಗೆ ಸಾವಿನ ಕಡೆಯ ದಿನ ಐದನೇ ಬಾರಿ ಜೀವದಾನ ಸಿಕ್ಕುತ್ತಾ, ಅಥವಾ ಗಲ್ಲು ನಿಶ್ಚಿತವೇ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *