ಜಾಮೀನು ನಿರಾಕರಣೆ – ಮಾ.29ರವರೆಗೂ ಪೊಲೀಸ್ ಕಸ್ಟಡಿಗೆ ನೀರವ್ ಮೋದಿ

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಪರಾರಿಯಾಗಿ ಲಂಡನ್ ಪೊಲೀಸರಿಂದ ಬಂಧನವಾಗಿದ್ದ ಉದ್ಯಮಿ ನೀರವ್ ಮೋದಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ನೀರವ್ ಮೋದಿಯನ್ನು ಲಂಡನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ನ್ಯಾಯಾಲಯಕ್ಕೆ ಇಂದು ಹಾಜರು ಪಡಿಸಲಾಗಿತ್ತು. ಈ ವೇಳೆ ನೀರವ್ ಮೋದಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಪರಿಣಾಮ ಮಾರ್ಚ್ 29ರವರೆಗೂ ನೀರವ್ ಮೋದಿ ಪೊಲೀಸ್ ಕಸ್ಟಡಿಯಲ್ಲೇ ಉಳಿಯಲಿದ್ದಾರೆ.

ಮಂಗಳವಾರ ಲಂಡನ್ ಕೇಂದ್ರ ಭಾಗದಲ್ಲಿರುವ ಹೋಲ್ಬಾರ್ನ್ ಮೆಟ್ರೋ ನಿಲ್ದಾಣದಲ್ಲಿ ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಲಂಡನ್ ನಲ್ಲಿ ನೆಲಿಸಿದ್ದ ಬಗ್ಗೆ ಮಾಧ್ಯಮ ವರದಿ ಪ್ರಕಟವಾದ ಬಳಿಕ ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಜೊತೆ ನಿರವ್ ಬಂಧನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿತ್ತು. ಇದಾದ ಬಳಿಕ ಬ್ರಿಟನ್‍ನ ವೆಸ್ಟ್‍ಮಿನ್‍ಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ನಿರವ್ ಮೋದಿ ಬಂಧನವಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

48 ವರ್ಷದ ನೀರವ್ ಮೋದಿ ಲಂಡನ್ ನಲ್ಲಿ ರಾಜರೋಷವಾಗಿ ಓಡಾಡುತ್ತಿರವ ಬಗ್ಗೆ ಟೆಲಿಗ್ರಾಫ್ ಮಾರ್ಚ್ 9 ರಂದು ವರದಿ ಮಾಡಿತ್ತು. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೆ “ನೋ ಕಮೆಂಟ್ಸ್” ಎಂದು ಉತ್ತರಿಸಿದ್ದರು. 13 ಸಾವಿರ ಕೋಟಿ ರೂ. ವಂಚನೆಗೈದ ಆರೋಪಿ ನೀರವ್ ಮೋದಿಗೆ ಇನ್ನು ಎಷ್ಟು ದಿನ ಲಂಡನ್ ನಲ್ಲಿ ಇರಲಿದ್ದೀರಿ ಎನ್ನುವ ಪ್ರಶ್ನೆಗೆ ಅವರಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. 48 ವರ್ಷದ ನೀರವ್ ಮೋದಿ ಲಂಡನ್ ನಗರದಲ್ಲಿ ಹೋದ ಎಲ್ಲ ಕಡೆ ಪತ್ರಕರ್ತರು ಅವರನ್ನು ಹಿಂಬಾಲಿಸಿದ್ದರು. ಆದರೆ ಯಾವುದೇ ಪ್ರಶ್ನೆಗೆ ಉತ್ತರಿಸಲಿಲ್ಲ. ಕೊನೆಗೆ ನೀರವ್ ಮೋದಿ ಟ್ಯಾಕ್ಸಿ ಮಾಡಿ ಹೊರಟು ಹೋಗಿರುವ ದೃಶ್ಯ ಸೆರೆಯಾಗಿತ್ತು.

ಏನಿದು ಪ್ರಕರಣ?:
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.

Comments

Leave a Reply

Your email address will not be published. Required fields are marked *