ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಒಡೆಯಿತು ಅಣೆಕಟ್ಟು – 9 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಮಳೆರಾಯನ ಆರ್ಭಟಕ್ಕೆ ರತ್ನಗಿರಿ ಜಿಲ್ಲೆಯ ಚಿಲುನ್ ತಹಸಿಲ್‍ನಲ್ಲಿರುವ ಟಿವ್ರೆ ಕಿಂಡಿ ಅಣೆಕಟ್ಟು ಒಡೆದಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ.

ಅಣೆಕಟ್ಟು ಒಡೆದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ಏಳು ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಸುಮಾರು 18-20 ಜನರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ರತ್ನಗಿರಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಈ ದುರಂತ ನಡೆದಿದೆ ಎಂದು ಊಹಿಸಲಾಗಿದೆ.

ಅಣೆಕಟ್ಟಿನ ಬಳಿಯ ಸಣ್ಣ ಹಳ್ಳಿಯ ಸುಮಾರು 19 ಜನರು ಕಣ್ಮರೆಯಾಗಿದ್ದಾರೆ. ಅವರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈವರೆಗೆ ಮೂರು ಮಹಿಳೆಯರು ಸೇರಿದಂತೆ ಒಟ್ಟು 9 ಜನರ ಶವಗಳನ್ನು ರಕ್ಷಣಾ ತಂಡ ಪತ್ತೆಹಚ್ಚಿದೆ.

ಇದಲ್ಲದೆ ಸ್ಥಳೀಯ ಆಡಳಿತವು ಪೊಲೀಸರ ಸಹಯೋಗದೊಂದಿಗೆ ರಾಷ್ಟೀಯ ವಿಪತ್ತು ಪಡೆ(ಎನ್‍ಡಿಆರ್‍ಎಫ್) ರಕ್ಷಣಾ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಗಳಲ್ಲಿ ಉಂಟಾದ ಪ್ರವಾಹದ ಅಬ್ಬರಕ್ಕೆ ಸುಮಾರು 12 ಮನೆಗಳು ಕೊಚ್ಚಿಹೋಗಿವೆ. ಹಾಗೆಯೇ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೇ ಅಣೆಕಟ್ಟೆ ಬಿರುಕು ಬಿಟ್ಟಿತ್ತು. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೆವು. ಈ ಸ್ಥಿತಿ ಬರುವ ಮುಂಚೆಯೇ ಅಣೆಕಟ್ಟಿನ ದುರಸ್ಥಿ ಕಾರ್ಯ ಮಾಡಿದ್ದರೆ ಹಲವು ಜೀವಗಳು ಉಳಿಯುತ್ತಿದ್ದವು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಹಾರಾಷ್ಟ್ರ ಸಿಎಂ ತನಿಖೆ ನಡೆಸಲು ಆದೇಶಿಸಿದ್ದು, ಅಣೆಕಟ್ಟಿನ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾವುದು. ಜಿಲ್ಲಾಡಳಿತವನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಹಾಗೂ ಜನರ ಸುರಕ್ಷತೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *