ದೊಡ್ಡಗೌಡರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ – ರೇವತಿಗೆ ಉಂಗುರ ತೊಡಿಸಲು ನಿಖಿಲ್ ಖಾತರ

ಬೆಂಗಳೂರು: ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಕುಟುಂಬದಲ್ಲಿ ನಿಶ್ಚಿತಾರ್ಥದ ಸಂಭ್ರಮ ಮನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಇಂದು ರೇವತಿ ಜೊತೆಗೆ ಅಧಿಕೃತವಾಗಿ ಎಂಗೇಜ್ ಆಗುತ್ತಿದ್ದಾರೆ.

ಜಾಗ್ವಾರ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿರುವ ನಿಖಿಲ್ ಕುಮಾರಸ್ವಾಮಿ ಮೂರೇ ಸಿನಿಮಾಗಳಲ್ಲಿ ನಟಿಸಿದ್ರೂ ತಮ್ಮದೇ ಆದ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂದು ಮನೆಯವರು ನೋಡಿರುವ ರೇವತಿ ಅವರ ಜೊತೆ ನಿಖಿಲ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದವರು ಹಾಗೂ ಗಣ್ಯರ ಸಮ್ಮುಖದಲ್ಲಿ ನಿಖಿಲ್ ಹಾಗೂ ರೇವತಿ ತಾಜ್ ವೆಸ್ಟೆಂಡ್‍ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಕಲ್ಲರ್ ಫುಲ್ ವೇದಿಕೆಯಲ್ಲಿ ಉಂಗುರವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ.

ಹಾಲಿ ಶಾಸಕ ಲೇಔಟ್ ಕೃಷ್ಣಪ್ಪ ಮೊಮ್ಮಗಳಾಗಿರುವ ರೇವತಿ ನಿಶ್ಚಿತಾರ್ಥವನ್ನು ಮುಂದೆ ನಿಂತು ಮಾಡುತ್ತಿದ್ದಾರೆ. ಮಂಜುನಾಥ್ ಮತ್ತು ಶ್ರೀದೇವಿ ಎರಡನೇ ಪುತ್ರಿಯಾಗಿರುವ ರೇವತಿಯನ್ನು ಇತ್ತೀಚೆಗಷ್ಟೇ ನಿಖಿಲ್ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ಹುಡುಗಿ ನೋಡುವ ಕಾರ್ಯಕ್ರಮವನ್ನು ಮುಗಿಸಿದ್ದರು. ಎಂಸಿಎ ಪದವೀಧರೆಯಾಗಿರುವ ರೇವತಿ ಮನೆಯವರು ಕುಮಾರಸ್ವಾಮಿಯವರ ಮನೆಗೆ ಭೇಟಿ ಕೊಟ್ಟು ಮದುವೆ ಮಾತುಕತೆಯನ್ನು ನಡೆಸಿದ್ದರು.

ತಾಜ್ ವೆಸ್ಟೆಂಡ್‍ನಲ್ಲಿ ಹೋಟೆಲ್ ಮದುವಣಗಿತ್ತಿಯಂತೆ ಅಲಂಕಾರಿಸಲಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಗುರು-ಹಿರಿಯರ ಸಮ್ಮುಖದಲ್ಲಿ ನಿಖಿಲ್, ರೇವತಿಯ ಕೈಗೆ ಉಂಗುರವನ್ನು ತೊಡಿಸಲಿದ್ದಾರೆ. ದೊಡ್ಡ ಗೌಡ್ರ ಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ರಾಜಕಾರಣಿಗಳು ಮತ್ತು ಚಿತ್ರರಂಗದವರಿಗೆ ಆಹ್ವಾನ ನೀಡಲಾಗಿದೆ. ಸಿನಿಮಾ ತಾರೆಯರು ಮತ್ತು ರಾಜಕೀಯದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಏಪ್ರಿಲ್‍ನಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದು, ಖುದ್ದು ಕುಮಾರಸ್ವಾಮಿ ಅವರೇ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *