ಅಭಿವೃದ್ಧಿ ನನ್ನ ಅಜೆಂಡಾ, ಸುಳ್ಳು ಆರೋಪಗಳೇ ಅವರ ಅಜೆಂಡಾ: ನಿಖಿಲ್

– ಸುಮಲತಾ ಸಿಕ್ಕರೆ ಆಶೀರ್ವಾದ ಪಡೆದು ಮುಂದೆ ಸಾಗ್ತೀನಿ

ಮಂಡ್ಯ: ಅವರು ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ. ಆದರೆ ಅಭಿವೃದ್ಧಿ ನನ್ನ ಅಜೆಂಡಾ. ಸುಳ್ಳು ಆರೋಪಗಳೇ ಅವರ ಅಜೆಂಡಾ ಎಂದು ಸುಮಲತಾ ವಿರುದ್ಧ ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್, ಗುರುದೇವರ ಹಳ್ಳಿಯ ಮೂರು ಜನ ಜೆಡಿಎಸ್ ಕಾರ್ಯಕರ್ತರಿಗೆ ಪೆಟ್ಟು ಬಿದ್ದಿದೆ. ಕಳೆದ ದಿನ ಪ್ರಚಾರ ಮಾಡುವಾಗ ಮಾತಿನ ಚಕಮಕಿ ನಡೆದಿದೆ. ದಯವಿಟ್ಟು ಚುನಾವಣೆಯನ್ನು ಚುನಾವಣೆ ರೀತಿ ಎದುರಿಸೋಣ. ಯಾವ ಪಕ್ಷದಿಂದಲೂ ಯಾರೂ ಕೂಡ ಆಕ್ರೋಶಕ್ಕೆ ಒಳಗಾಗಿ ಹಿಂಸೆಗೆ ಮುಂದಾಗಬಾರದು. ಈ ರೀತಿಯ ಹಲ್ಲೆಗಳು ನಡೆದಾಗ ಪ್ರಚಾರ ಬಿಟ್ಟು ಬಿಜೆಪಿ ಮತ್ತು ಸುಮಲತಾರ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ನನ್ನ ಕಾರ್ಯಕರ್ತರು ನನ್ನ ಕುಟುಂಬ ಸದಸ್ಯರು. ಅವರಿಗೆ ನೋವಾದದರೆ ನನಗೆ ನೋವು ಆಗುತ್ತದೆ ಎಂದು ಗರಂ ಆದ್ರು.

ದೇವೇಗೌಡರ ಕುಟುಂಬವನ್ನು ಮಂಡ್ಯ ಜನತೆ ಮೂರು ತಲೆಮಾರಿನಿಂದ ನೋಡಿಕೊಂಡು ಬರುತ್ತಿದ್ದಾರೆ. ಕುಮಾರಣ್ಣ ಮತ್ತು ದೇವೇಗೌಡರಿಗೆ ಪ್ರಾಣ ಕೊಡುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಾರೆ. ಈ ರೀತಿ ಹಲ್ಲೆಗಳು ನಡೆದಾಗ ನಮ್ಮ ಕಾರ್ಯಕರ್ತರು ನಮ್ಮ ಬಳಿ ಬರುತ್ತಾರೆ. ಈ ಹಲ್ಲೆಯ ಬಗ್ಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಉತ್ತರ ಕೊಡಬೇಕು. ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಗೂಂಡಾಗಿರಿ ನಡೆಸುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಇಷ್ಟೆಲ್ಲ ಗಲಾಟೆ ನಡೆದರೂ ನಾವು ಸುಮ್ಮನಿದ್ದೇವೆ. ಆಕ್ರೋಶಕ್ಕೆ ಒಳಗಾಗಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಿದ್ದೇವೆ. ಒಂದು ವೇಳೆ ಗೆದ್ದು ಬಂದಲ್ಲಿ ಮಂಡ್ಯ ಜನತೆಗೆ ಏನು ಮಾಡುತ್ತಾರೆ. ಅಭಿವೃದ್ಧಿ ಏನು ಅದರ ಬಗ್ಗೆ ಮಾತನಾಡಲಿ. ಅದನ್ನು ಹೇಳೋದು ಬಿಟ್ಟು ಕುಮಾರಣ್ಣ ಕೇಬಲ್ ಕಟ್ ಮಾಡಿದರೂ, ನಾಮಪತ್ರ ಸಲ್ಲಿಕೆ ಸರಿಯಾಗಿ ಮಾಡಿಲ್ಲ ಎಂಬ ಸುಳ್ಳು ಆರೋಪಗಳನ್ನು ಮಾಡೋದನ್ನ ನಿಲ್ಲಿಸಲಿ ಎಂದು ಕಿಡಿಕಾರಿದರು.

ನಮ್ಮ ತಂದೆಯವರು ನನಗೆ ದೊಡ್ಡ ಶಕ್ತಿ. ತಲೆ ಕೆಡಿಸಿಕೊಳ್ಳದೆ ರಾಜ್ಯದಲ್ಲಿ ಪ್ರವಾಸ ಮಾಡಿ ಎಂದು ಹೇಳಿದ್ದೇನೆ. ಒಂದೆರೆಡು ದಿನ ಮಾತ್ರ ನನಗೆ ಕೊಡಿ ಸಾಕು ಎಂದು ಕೇಳಿದ್ದೇನೆ. ಬಹುಶಃ ನಾಳೆಯಿಂದ(ಮಂಗಳವಾರ) ತಂದೆಯವರು ಮಂಡ್ಯದಲ್ಲಿ ಇರಬಹುದು ಎಂದು ಸ್ಪಷ್ಟಪಡಿಸಿದರು.

ಇನ್ನೂ ಸುಮಲತಾ ಮತ್ತು ನಿಖಿಲ್ ಇಬ್ಬರು ನಾಗಮಂಗಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ವಿಚಾರವಾಗಿ, ಒಂದು ವೇಳೆ ಪ್ರಚಾರದ ವೇಳೆ ಸುಮಲತಾ-ನಾವು ಮುಖಾಮುಖಿಯಾದ್ರೆ ಅವರ ಆಶಿರ್ವಾದ ಪಡೆದು ಮುಂದೆ ಸಾಗುತ್ತೇನೆ ಎಂದು ನಿಖಿಲ್ ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *