ದರ್ಶನ್ ನನ್ನ ನಡುವೆ ಮುನಿಸಿಲ್ಲ, ಕುರುಕ್ಷೇತ್ರ ನನ್ನಿಂದಾಗಿ ನಿಂತಿಲ್ಲ: ನಿಖಿಲ್ ಕುಮಾರಸ್ವಾಮಿ

-ಸೀತಾರಾಮ ಕಲ್ಯಾಣ ರಿಮೇಕ್ ಅಲ್ಲ, ಸ್ವಮೇಕ್

ಬೆಂಗಳೂರು: ಗಾಂಧಿನಗರದಲ್ಲಿ ಕೆಲವು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಕುಮಾರಸ್ವಾಮಿ ಮಧ್ಯೆ ಮುನಿಸಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಈ ಸಂಬಂಧ ನಿಖಿಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ನಮ್ಮಿಬ್ಬರ ಮಧ್ಯೆ ಯಾವುದೇ ಮುನಿಸಿಲ್ಲ ಎಂದು ತಿಳಿಸಿದ್ದಾರೆ.

ಸೀತಾರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರ್, ಸೀತಾರಾಮ ಕಲ್ಯಾಣ ನನ್ನ ಎರಡನೇ ಸಿನಿಮಾ. ಕುರಕ್ಷೇತ್ರ ಸೇರಿದರೆ ಇದು ಮೂರನೇ ಸಿನಿಮಾ. ದರ್ಶನ್ ಇಂದು 52 ಅಥವಾ 53ನೇ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ. ನಾನು ಎಷ್ಟೇ ಸಿನಿಮಾಗಳನ್ನು ಮಾಡಿದ್ರೂ, ನಾನು ಏನು ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ಗಾಂಧಿನಗರದಲ್ಲಿ ಹಲವು ವಿಚಾರಗಳು, ಊಹಾಪೋಹಗಳು ಹರಿದಾಡುತ್ತಿರುತ್ತವೆ. ಅಂತಹ ವಿಚಾರಗಳ ಬಗ್ಗೆ ಚರ್ಚೆ ನಡೆಸೋದು ಸೂಕ್ತವಲ್ಲ. ನಾವೆಲ್ಲರೂ ಕನ್ನಡ ಚಿತ್ರರಂಗದ ಅಭಿಮಾನಿಗಳು. ಕನ್ನಡ ಸಿನಿಮಾ ಉಳಿಬೇಕು ಎಂಬ ಉದ್ದೇಶದಿಂದ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ರು.

ಕುರುಕ್ಷೇತ್ರ ನನ್ನಿಂದ ನಿಂತಿಲ್ಲ: ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ನನ್ನ ಅಭಿಮನ್ಯು ಪಾತ್ರದ ಡಬ್ಬಿಂಗ್ ಬಾಕಿ ಉಳಿದುಕೊಂಡಿದೆ. ಇತ್ತೀಚೆಗೆ ಮುನಿರತ್ನ ಸರ್ ಜೊತೆ ಡಬ್ಬಿಂಗ್ ಬಗ್ಗೆ ಮಾತನಾಡಿದ್ದೇನೆ. ಅಭಿಮನ್ಯು ಪಾತ್ರದ ಸಿಜೆ (ಗ್ರಾಫಿಕ್ಸ್) ನಡೆಯುತ್ತಿದ್ದು, ಅರ್ಧ ಮಾತ್ರ ಬಾಕಿ ಉಳಿದುಕೊಂಡಿದೆ. ಸಿಜೆ ಮುಗಿದ ಬಳಿಕ ಮುನಿ ಸರ್ ಯಾವಾಗ ಕರೆದರೂ ನಾನು ಹೋಗಿ ಡಬ್ಬಿಂಗ್ ಮಾಡಿಕೊಟ್ಟು ಬರ್ತೀನಿ. ಸೀತಾರಾಮ ಕಲ್ಯಾಣ ನಮ್ಮ ಹೋಮ್ ಬ್ಯಾನರ್‍ನಲ್ಲಿ ನಡೆಯುತ್ತಿದ್ದು, ಒಂದೆರೆಡು ದಿನ ಹೊಂದಾಣಿಕೆ ಮಾಡಿಕೊಳ್ಳತ್ತೇನೆ ಎಂದು ತಿಳಿಸಿದರು.

ರಿಮೇಕ್ ಅಲ್ಲ, ಸ್ವಮೇಕ್: ಸೀತಾರಾಮ ಕಲ್ಯಾಣದ ಟೀಸರ್ ಬಿಡುಗಡೆ ಮುನ್ನವೇ ಕೆಲವೊಂದು ಪ್ರಶ್ನೆಗಳು ಪ್ರೇಕ್ಷಕರ ವಲಯದಿಂದ ಕೇಳಿ ಬರಬಹುದು ಎಂದು ಅಂದಾಜಿಸಲಾಗಿತ್ತು. ರಾಮ್ ಲಕ್ಷ್ಮಣ್ ಸಾರಥ್ಯದಲ್ಲಿ ಚಿತ್ರದ ಸಾಹಸ ದೃಶ್ಯಗಳು ಮೂಡಿ ಬಂದಿವೆ. ಟಾಲಿವುಡ್ ಮತ್ತು ಕಾಲಿವುಡ್‍ನಲ್ಲಿ ಬ್ಯೂಸಿಯಾಗಿರುವ ರಾಮ್ ಲಕ್ಷ್ಮಣ್ ನನಗಾಗಿ ವಿಶೇಷ ಆ್ಯಕ್ಷನ್ ಸೀನ್ ಮಾಡಿಸಿದ್ದಾರೆ. ನಮ್ಮ ಕನ್ನಡ ಜನತೆ ತುಂಬಾ ವಿಶಾಲ ಹೃದಯವಂತರಾಗಿದ್ದು, ಎಲ್ಲ ಭಾಷೆಯ ಚಿತ್ರಗಳನ್ನು ವೀಕ್ಷಣೆ ಮಾಡ್ತಾರೆ. ಅದರಲ್ಲಿಯೂ ತೆಲುಗು ಭಾಷೆಯ ಚಿತ್ರಗಳನ್ನು ನೋಡಿ, ಅಲ್ಲಿಯ ಆ್ಯಕ್ಷನ್ ಸೀನ್ ಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಕನ್ನಡದಲ್ಲಿಯೂ ಅಂತಹ ಆ್ಯಕ್ಷನ್ ಸೀನ್ ಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಮ್ಮದು ರಿಮೇಕ್ ಅಲ್ಲ, ಸ್ವಮೇಕ್ ಚಿತ್ರ. ಹಲವು ಸಿನಿಮಾಗಳ ಪ್ರೇರಣೆಯಿಂದ ಸೀತರಾಮ ಕಲ್ಯಾಣ ತಯಾರಾಗಿದೆ ಎಂದು ಸ್ಪಷ್ಟಪಡಿಸಿದರು.

ಟೀಸರ್ ರಿಲೀಸ್ ಆದ ಕೂಡಲೇ ಸಿಕ್ಕಾಪಟ್ಟೆ ಹಿಟ್ ಆಯಿತು. ಕನ್ನಡ ಜನತೆ ನನ್ನ ಹಾಗು ಚಿತ್ರತಂಡದಿಂದ ಧನ್ಯವಾದ ಹೇಳುತ್ತೇನೆ. ಇದೇ ರೀತಿ ಎಲ್ಲ ಕನ್ನಡ ಸಿನಿಮಾಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ಒಂದು ತಿಂಗಳಲ್ಲಿ ಸಿನಿಮಾ ಟ್ರೇಲರ್ ಸಹ ಬಿಡುಗಡೆ ಆಗಲಿದ್ದು, ನಿಮ್ಮೆಲ್ಲರ ಬೆಂಬಲ ನಮಗೆ ಬೇಕು. ಟ್ರೇಲರ್ ನಲ್ಲಿ ಎಲ್ಲ ಕಲಾವಿದರನ್ನು ನೀವು ನೋಡಬಹುದು ಅಂತಾ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *