ಸುಮಕ್ಕನಿಗೆ ಟಾಂಗ್ ಕೊಡಲು ಸಜ್ಜಾದ ನಿಖಿಲ್-ಜ್ಯೋತಿಷಿಗಳ ಸಲಹೆಯಂತೆ ಇಂದು ನಾಮಿನೇಷನ್

-ಗುರುವಾರ ನಾಮಪತ್ರ ಸಲ್ಲಿಸಿದ್ರೆ ಕೈ ಹಿಡಿಯುತ್ತಾ ಗುರುಬಲ..?

ಬೆಂಗಳೂರು: ಮಂಡ್ಯ ರಣಕಣದಲ್ಲಿ ಸುಮಲತಾ ಅಂಬರೀಶ್ ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ್ದೂ ಆಯ್ತು. ಅಬ್ಬರದಿಂದ ಪ್ರಚಾರಕ್ಕೆ ಚಾಲನೆ ನೀಡಿದ್ದೂ ಆಯ್ತು. ಇದೀಗ ನಿಖಿಲ್ ಕುಮಾರಸ್ವಾಮಿ ಸರದಿ. ಮೈತ್ರಿಕೂಟ ಅಭ್ಯರ್ಥಿಯಾಗಿ ನಿಖಿಲ್ ಇಂದು ನಾಮಿನೇಷನ್ ಮಾಡಲಿದ್ದಾರೆ.

ಬುಧವಾರ ಇಡೀ ಜೆಡಿಎಸ್ ಕೋಟೆ ಬೆಚ್ಚಿ ಬೀಳುವಂತೆ ಅಪಾರ ಅಭಿಮಾನಿಗಳೊಂದಿಗೆ ಸುಮಲತಾ ನಾಮಿನೇಷನ್ ಮಾಡಿ ಅಬ್ಬರಿಸಿದ್ದಾರೆ. ಹೀಗಾಗಿ ಸುಮಕ್ಕನಿಗೆ ಟಾಂಗ್ ನೀಡಲು ತೆನೆ ಹೊತ್ತ ನಾಯಕರು ಅಣಿಯಾಗಿದ್ದು, ಇಂದು ನಿಖಿಲ್ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ 12 ಗಂಟೆಯೊಳಗೆ ನಿಖಿಲ್, ತಮ್ಮ ತಾತ, ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಸಮಯ ನಿಗದಿಪಡಿಸಲಾಗಿದೆ. ಗುರುವಾರ ನಾಮಪತ್ರ ಸಲ್ಲಿಸಿದ್ರೆ ಗುರುಬಲ ಕೂಡಿಬರಲಿದೆ ಅನ್ನೋ ನಂಬಿಕೆಯಿಂದಾಗಿ ಇಂದು ನಾಮಿನೇಷನ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷ ಅಂದ್ರೆ ಇಂದು ಸಲ್ಲಿಸೋ ನಾಮಿನೇಷನ್ ಕೇವಲ ಸಾಂಕೇತಿಕವಾಗಿದೆ. ಮಾರ್ಚ್ 25 ರಂದು, ತಂದೆ ತಾಯಿ ಜೊತೆ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿರುವ ನಿಖಿಲ್ ಕುಮಾರಸ್ವಾಮಿ, ಅಂದು ಬೃಹತ್ ಬಹಿರಂಗ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲೇ ಇರುವ ಸಿಎಂ ಸಭೆಗಳ ಮೇಲೆ ಸಭೆ ನಡೆಸಿ ಅಖಾಡ ಸಿದ್ಧಗೊಳಿಸಿದ್ದಾರೆ.

ಇತ್ತ ಸುಮಲತಾ ಇಂದು ಕೂಡ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮುಂದುವರಿಸಲಿದ್ದಾರೆ. ಮಂಡ್ಯ ನಗರದ ವಿವಿಧಡೆ ಸಂಚರಿಸಿ ಮತಯಾಚನೆ ಮಾಡಲಿದ್ದಾರೆ. ಸುಮಲತಾಗೆ ಪುತ್ರ ಅಭಿಷೇಕ್, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ. ಒಟ್ಟಾರೆ ಘಟಾನುಘಟಿಗಳ ಸ್ಪರ್ಧೆಯಿಂದ ಸಕ್ಕರೆ ನಾಡಿನ ಅಖಾಡ ರಂಗೇರಿದ್ದು, ಪ್ರಚಾರ ಇನ್ನಷ್ಟು ಬಿರುಸು ಪಡೆಯಲಿದೆ.

Comments

Leave a Reply

Your email address will not be published. Required fields are marked *