ನಿಧಿಯಾಸೆಗೆ ಲಿಂಗವನ್ನೇ ಕೆಡವಿದ ದುಷ್ಕರ್ಮಿಗಳು

ಕೋಲಾರ: ನಿಧಿಯಾಸೆಗೆ ದುಷ್ಕರ್ಮಿಗಳು ಪುರಾತನ ಕಾಲದ ಲಿಂಗವನ್ನು ಧ್ವಂಸ ಮಾಡಿರುವ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ನಡೆದಿದೆ.

ಪಂಚಲಿಂಗ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ನಂಬಿಹಳ್ಳಿಯ ಚೌಡಪ್ಪ ಎಂಬವರ ಜಮೀನನಲ್ಲಿರುವ ಪಂಚಲಿಂಗಗಳನ್ನು ಧ್ವಂಸ ಮಾಡಿದ್ದು, ನಿಧಿ ಆಸೆಗಾಗಿ ಶಿವಲಿಂಗದ ಬಳಿ ದುಷ್ಕರ್ಮಿಗಳು ವಾಮಾಚಾರ ಮಾಡಿಸಿದ್ದಾರೆ.

ಲಿಂಗವನ್ನು ಹಾರೆಯಿಂದ ಕಿತ್ತು ಹಾಕಿ ಮಾಟ ಮಂತ್ರಕ್ಕೆ ತಂದಿದ್ದ ವಸ್ತುಗಳು ಹಾಗೂ ಅಗೆಯಲು ತಂದಿದ್ದ ಕಬ್ಬಿಣದ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆಯೂ ನಿಧಿಯಾಸೆಗೆ ಲಿಂಗವನ್ನು ಕೆಡವಿದ್ದ ದುಷ್ಕರ್ಮಿಗಳು ದೇವಾಲಯವನ್ನು ವಿರೂಪಗೊಳಿಸಿದ್ದರು. ಪುರಾತನ ದೇವಾಲಯ ಇದಾಗಿದ್ದು, ಶಿವಲಿಂಗಕ್ಕೆ ಸುಮಾರು ವರ್ಷಗಳಿಂದ ಸರ್ಪ ಕಾವಲಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಸ್ಥಳದಲ್ಲಿ ಅರಿಶಿಣ, ಕುಂಕುಮ, ತೆಂಗಿನ ಕಾಯಿ, ನಿಂಬೆಹಣ್ಣು ಪತ್ತೆಯಾಗಿದ್ದು, ವಾಮಾಚಾರದ ಮೂಲಕ ಹಾವಿಗೆ ತೊಂದರೆ ನೀಡಿ ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ ದೇವರ ಕೃಪೆಯೋ ಅಥವಾ ಧೈವ ಶಕ್ತಿಯ ಪ್ರಭಾವವೋ ನಿಧಿ ಸಿಗದೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *