ಟಿಎಂಸಿ ನಾಯಕನ ಮನೆಯಲ್ಲಿ ಸ್ಫೋಟ ಪ್ರಕರಣ – ತನಿಖೆಗೆ ತೆರಳಿದ್ದ ಎನ್‍ಐಎ ಅಧಿಕಾರಿಗಳ ಕಾರಿನ ಮೇಲೆ ದಾಳಿ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಮುಖಂಡರೊಬ್ಬರ ಮನೆಯಲ್ಲಿ 2022ರಲ್ಲಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ (2022 Blast Case ) ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ತೆರಳಿದ್ದ ಎನ್‍ಐಎ ಅಧಿಕಾರಿಗಳ ಕಾರಿನ ಮೇಲೆ ಇಟ್ಟಿಗೆ, ಕಲ್ಲುಗಳನ್ನು ಎಸೆದ ಘಟನೆ ಪಶ್ಚಿಮ ಬಂಗಾಳದ (West Bengal) ಪೂರ್ವ ಮಿಡ್ನಾಪುರದ ಭೂಪತಿನಗರದಲ್ಲಿ ನಡೆದಿದೆ.

ಮುಂಜಾನೆ 5:30ರ ವೇಳೆಗೆ ಇಬ್ಬರನ್ನು ಬಂಧಿಸಿ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದ ವೇಳೆ, ಕಿಡಿಗೇಡಿಗಳು ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಸಂಚರಿಸುತ್ತಿದ್ದ ಕಾರಿನ ಗ್ಲಾಸ್‍ಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗಳಾಗಿರುವ ಬಗ್ಗೆ ಈವರೆಗೂ ಮಾಹಿತಿ ಲಭ್ಯವಾಗಿಲ್ಲ. ಉದ್ರಿಕ್ತ ಗುಂಪನ್ನು ನಿಯಂತ್ರಸಲು ಸಿಆರ್‍ಪಿಎಫ್ ಸಿಬ್ಬಂದಿ ಲಾಠಿಚಾರ್ಜ್ ನಡೆಸಿದ್ದಾರೆ.

ಡಿಸೆಂಬರ್ 3, 2022ರಂದು, ಭೂಪತಿನಗರದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದರು. ಕಳೆದ ತಿಂಗಳು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‍ಐಎ, ತೃಣಮೂಲ ಕಾಂಗ್ರೆಸ್‍ನ 8 ನಾಯಕರ ವಿಚಾರಣೆ ನಡೆಸಿತ್ತು. ಎನ್‍ಐಎ ಕ್ರಮವನ್ನು ಬಿಜೆಪಿ ಪಿತೂರಿ ಎಂದು ಟಿಎಂಸಿ ಆರೋಪಿಸಿತ್ತು.

ಮಾರ್ಚ್ 28ರಂದು ನ್ಯೂ ಟೌನ್‍ನಲ್ಲಿರುವ ಎನ್‍ಐಎ ಕಚೇರಿಗೆ ಭೇಟಿ ನೀಡುವಂತೆ ಸೂಚಿಸಿದ ಹಿಂದಿನ ಸಮನ್ಸ್‍ಗಳನ್ನು ತಪ್ಪಿಸಿದ ನಂತರ ಕೇಂದ್ರ ತನಿಖಾ ಸಂಸ್ಥೆ ಎಂಟು ಮಂದಿಯನ್ನು ಹಾಜರಾಗುವಂತೆ ಕೇಳಿಕೊಂಡಿತ್ತು. ಈ ಕ್ರಮದ ಹಿಂದೆ ಪ್ರತಿಪಕ್ಷ ಬಿಜೆಪಿ ಕೈವಾಡವಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಆರೋಪಿಸಿದ್ದಾರೆ.