ರಜೆ, ಸಂಬಳ, ಹಾಜರಿ ಯಾವುದೂ ಬೇಡ – ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ 450 ಎನ್‍ಹೆಚ್‍ಎಂ ಸಿಬ್ಬಂದಿ

ಉಡುಪಿ: ನ್ಯಾಶನಲ್ ಹೆಲ್ತ್ ಮಷೀನ್ (ಎನ್‍ಎಚ್‍ಎಂ)ನ 24,000 ಸಿಬ್ಬಂದಿ ರಾಜ್ಯದಲ್ಲಿ ಇಂದು ಗಾಂಧಿಗಿರಿ ಮಾಡಿದ್ದಾರೆ. ರಜೆ ತೆಗೆದುಕೊಳ್ಳದೆ ಹಾಜರಿ ಹಾಕದೆ ಸಂಬಳ ತೆಗೆದುಕೊಳ್ಳದೆ ಸೇವೆ ಮಾಡುತ್ತಿದ್ದಾರೆ.

ಆರೋಗ್ಯ ಇಲಾಖೆಯ ಎನ್‍ಹೆಚ್‍ಎಂನ ಗುತ್ತಿಗೆ ಆಧಾರದ ಸಿಬ್ಬಂದಿಗೆ ಏಪ್ರಿಲ್ 1 ರಂದು ರಜೆ ಕೊಟ್ಟು ತಮ್ಮ ಹುದ್ದೆಯನ್ನು ರಿನಿವಲ್ ಮಾಡುವ ಉದ್ದೇಶವನ್ನು ಎನ್‍ಎಚ್‍ಎಂ ಹೊಂದಿತ್ತು. ಆದರೆ ರಾಜ್ಯದ 25 ಸಾವಿರ, ಉಡುಪಿ ಜಿಲ್ಲೆಯ 450 ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ. ಇವತ್ತು ರಜೆ ತೆಗೆದುಕೊಳ್ಳದೆ ದಿನಪೂರ್ತಿ ಉಚಿತ ಸೇವೆ ಮಾಡುತ್ತಿದ್ದಾರೆ. ತಮ್ಮ ಹಲವಾರು ವರ್ಷದ ಬೇಡಿಕೆ ಈ ವರ್ಷವೂ ಈಡೇರಿಸಿಲ್ಲ ಎಂದು ಸರ್ಕಾರ ಮತ್ತು ಯೋಜನೆಯ ನಿರ್ದೇಶಕರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಉಚಿತ ಸೇವೆ ಮಾಡುತ್ತಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಿಬ್ಬಂದಿ ಪ್ರತಿವರ್ಷ ಕಾಂಟ್ರ್ಯಾಕ್ಟ್ ಲೆಕ್ಕದಲ್ಲಿ ರಿನಿವಲ್ ಆಗುತ್ತಾ ಬರುತ್ತಾರೆ. ರಾಜ್ಯದಲ್ಲಿ ಸದ್ಯ ಮಹಾಮಾರಿ ಕೊರೊನಾದ ವಿಷಮ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲೂ ಕಾನೂನು ನಿಯಮ ಎಂದು ರಜೆ ನೀಡಲು ಎನ್‍ಎಚ್‍ಎಂ ನಿರ್ಧಾರ ತೆಗೆದುಕೊಂಡಿತ್ತು. ಇದರ ವಿರುದ್ಧ ಸಾಕಷ್ಟು ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಇಷ್ಟಾದರೂ ಇಲಾಖೆಯ ಅಧಿಕಾರಿಗಳು, ಸರ್ಕಾರ ತಮ್ಮ ಪಟ್ಟು ಸಡಿಲಿಸಿಲ್ಲ. ಇದೇ ಕಾರಣದಿಂದ ಉಡುಪಿ ಜಿಲ್ಲೆಯ ಸಿಬ್ಬಂದಿ ಗಾಂಧಿಗಿರಿ ಮಾಡಿದ್ದಾರೆ. ಸಂಬಳ ತೆಗೆದುಕೊಳ್ಳದೇ ರಜೆ ಮಾಡದೆ, ಹಾಜರಾತಿ ನಮೂದಿಸಿದೆ ಜಿಲ್ಲೆಯಾದ್ಯಂತ ಕೆಲಸ ಮಾಡುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರು ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಚೆಕ್ ಪೋಸ್ಟ್ ಹೀಗೆ ಎಲ್ಲ ಸ್ಥರದಲ್ಲಿ ಎನ್‍ಎಚ್‍ಎಂ ಸಿಬ್ಬಂದಿ ಉಚಿತ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಬ್ಬಂದಿಯೊಬ್ಬರು ಮಾತನಾಡಿ, ಕೊರೊನಾ ಪ್ರಕರಣಗಳೆಲ್ಲ ಹತೋಟಿಗೆ ಬಂದ ಮೇಲೆಯಾದರೂ ನಮ್ಮ ಬೇಡಿಕೆ ಈಡೇರಿಸಿ ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *