ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಖಾಸಗಿ ಕಾರು, ಜೀಪ್‌, ವ್ಯಾನ್‌ ಹೊಂದ್ದಿದ್ದೀರಾ? ಹಾಗಾದ್ರೆ ನಿಮಗೆ ಸಿಹಿಸುದ್ದಿ. 3 ಸಾವಿರ ರೂ. ವಾರ್ಷಿಕ ಟೋಲ್‌ ಪಾಸ್‌ (Annual Toll Pass) ಬಿಡುಗಡೆಯಾಗಿದೆ. ಈ ಪಾಸ್‌ ಬಿಡುಗಡೆಯಾದ ಬೆನ್ನಲ್ಲೇ ಹಲವು ಪ್ರಶ್ನೆಗಳು ನಿಮಗೆ ಬರಬಹುದು. ಹೀಗಾಗಿ ನೀವು ಕೇಳಬಹುದಾದ ಎಲ್ಲಾ ಪ್ರಶ್ನೆ, ಅನುಮಾನಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಎಂದರೇನು?
ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪ್ರಿಪೇಯ್ಡ್ ಪಾಸ್ ಅನ್ವಯವಾಗುತ್ತದೆ. ಈಗ ಟೋಲ್‌ ಪಾವತಿಗಳಿಗಾಗಿ ಫಾಸ್ಟ್‌ಟ್ಯಾಗ್ ಕಾರ್ಡ್‌ಗಳಲ್ಲಿರುವ ಹಣ ಖಾಲಿಯಾದರೆ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆ. ಆದರೆ ಈ ಪಾಸ್‌ ತಗೆದುಕೊಂಡರೆ ಪದೇ ಪದೇ ರಿಚಾರ್ಜ್‌ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣವನ್ನು ಅನುಮತಿಸುತ್ತದೆ.

ವಾರ್ಷಿಕ ಪಾಸ್ ಎಲ್ಲಿ ಬಳಸಬಹುದು?
ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ಟೋಲ್‌ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರದ ನಿರ್ಮಿಸಿದ ಎಕ್ಸ್‌ಪ್ರೆಸ್‌ವೇ ಅಥವಾ ಖಾಸಗಿಯಾಗಿ ನಿರ್ಮಿಸಿದ ರಸ್ತೆಯಲ್ಲಿ(ಉದಾಹರಣೆ ಬೆಂಗಳೂರಿನ ನೈಸ್‌ ರಸ್ತೆ) ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ನೊಂದಿಗೆ ಉಚಿತ ಪ್ರವೇಶವನ್ನು ಪಡೆಯಲು ಸಾಧ್ಯವಿಲ್ಲ.

ಎಲ್ಲಿ ಖರೀದಿಸಬಹುದು?
ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಲು ಮೀಸಲಾದ ಲಿಂಕ್ ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್‌ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಿದೆ.

ಪಾಸ್ ಹೇಗೆ ಸಕ್ರಿಯವಾಗುತ್ತದೆ?
ಪಾಸ್ ಅನ್ನು ಸಕ್ರಿಯಗೊಳಿಸಲು ವಾಹನ ಮತ್ತು FASTag ಅನ್ನು ಪರಿಶೀಲಿಸಲಾಗುತ್ತದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ 3,000 ರೂ. ಪಾವತಿಸಬಹುದು. ಪಾವತಿಯ ನಂತರ ಎರಡು ಗಂಟೆಗಳಲ್ಲಿ ಪಾಸ್‌ ಸಕ್ರಿಯವಾಗುತ್ತದೆ. ಒಂದು ವೇಳೆ ಫಾಸ್ಟ್‌ಟ್ಯಾಗ್‌ ಬ್ಲ್ಯಾಕ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದರೆ ವಾರ್ಷಿಕ ಪಾಸ್‌ ಸಿಗುವುದಿಲ್ಲ

ಅಸ್ತಿತ್ವದಲ್ಲಿರುವ ಬಳಕೆದಾರರು ಹೊಸ FASTag ಅನ್ನು ಖರೀದಿಸಬೇಕೇ?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಈಗಾಗಲೇ ತಮ್ಮ ವಾಹನಗಳಲ್ಲಿ FASTag ಹೊಂದಿರುವವರು ಹೊಸ FASTag ಅನ್ನು ಖರೀದಿಸುವ ಅಗತ್ಯವಿಲ್ಲ. ಈ ಪಾಸ್ ಅನ್ನು ನಿಮ್ಮ ಅಸ್ತಿತ್ವದಲ್ಲಿರುವ ಒಂದರಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಹೀಗಿದ್ದರೂ ವಾರ್ಷಿಕ ಪಾಸ್ ಪಡೆಯಲು FASTag ನ KYC ಅತ್ಯಗತ್ಯ.

ಎಷ್ಟು ಟ್ರಿಪ್‌ಗಳನ್ನು ಮಾಡಬಹುದು?
FASTag ವಾರ್ಷಿಕ ಪಾಸ್ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಅಥವಾ 200 ಟ್ರಿಪ್‌ಗಳನ್ನು ಅನುಮತಿಸುತ್ತದೆ. ಒಂದು ವರ್ಷ ಅಥವಾ 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ ನಂತರ ಅದು ಹಿಂದಿನಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.  ಇದನ್ನೂ ಓದಿ: ಸತತ 12ನೇ ಧ್ವಜಾರೋಹಣ, 103 ನಿಮಿಷ ಸುದೀರ್ಘ ಭಾಷಣ ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ

ಹೇಗೆ ಲೆಕ್ಕ ಹಾಕಲಾಗುತ್ತದೆ?
ಒಂದು ಟೋಲ್‌ ದಾಟಿದರೆ ಒಂದು ಟ್ರಿಪ್‌ ಎಂದು ಎಣಿಕೆ ಮಾಡಲಾಗುತ್ತದೆ. ಮತ್ತೊಮ್ಮೆ ಅದೇ ಟೋಲ್‌ ಬಳಸಿ ಮರಳಿದರೆ ಎರಡು ಟ್ರಿಪ್‌ ಎಂದು ಪರಿಗಣಿಸಲಾಗುತ್ತದೆ.

ಯಾವ ವಾಹನಗಳಿಗೆ ಸಿಗುತ್ತೆ?
VAHAN ಡೇಟಾಬೇಸ್ ಮೂಲಕ ಪರಿಶೀಲಿಸಿದ ಬಳಿಕ ಖಾಸಗಿ ವಾಣಿಜ್ಯೇತರ ಕಾರು/ಜೀಪ್/ವ್ಯಾನ್‌ಗಳಿಗೆ ಮಾತ್ರ ವಾರ್ಷಿಕ ಪಾಸ್ ಅನ್ವಯಿಸುತ್ತದೆ. ಯಾವುದೇ ವಾಣಿಜ್ಯ ವಾಹನದಲ್ಲಿ ಬಳಸಿದರೆ ಸೂಚನೆ ಇಲ್ಲದೆ ತಕ್ಷಣ ನಿಷ್ಕ್ರಿಯಗೊಳಿಸಲಾಗುತ್ತದೆ.

ಪಾಸ್‌ಗೆ ಯಾರು ಅರ್ಹರಲ್ಲ?
ಚಾಸಿಸ್ ಸಂಖ್ಯೆಯನ್ನು ಬಳಸಿಕೊಂಡು FASTag ನೋಂದಾಯಿಸಿದ್ದರೆ ನಿಮಗೆ ಪಾಸ್‌ ಸಿಗುವುದಿಲ್ಲ. ಇದಕ್ಕಾಗಿ ನೀವು ವಾಹನ ನೋಂದಣಿ ಸಂಖ್ಯೆಯನ್ನು (VRN) ನವೀಕರಿಸಬೇಕಾಗುತ್ತದೆ. ಅಲ್ಲದೇ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು.

ಪ್ರಯೋಜನಗಳೇನು?
ಟೋಲ್ ತೆರಿಗೆಯಲ್ಲಿ ಒಬ್ಬರು 5,000 ರಿಂದ 7,000 ರೂ.ಗಳನ್ನು ಉಳಿಸಬಹುದು. ಇದಲ್ಲದೆ ಪ್ರಯಾಣದ ಮಧ್ಯದಲ್ಲಿ ರೀಚಾರ್ಜ್ ಖಾಲಿಯಾಗುವ ಚಿಂತೆ ಇರುವುದಿಲ್ಲ.

ಮತ್ತೊಂದು ವಾಹನಕ್ಕೆ ವರ್ಗಾಯಿಸಬಹುದೇ?
ಇಲ್ಲ. ಹಾಗೆ ಮಾಡಿದ್ದರೆ ನಿಮ್ಮ ಪಾಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ವಾರ್ಷಿಕ ಪಾಸ್‌ಗೆ ಸಂಬಂಧಿಸಿದಂತೆ ಎಸ್‌ಎಂಎಸ್‌ ಬರುತ್ತಾ?
ಪಾಸ್ ಸಕ್ರಿಯಗೊಳಿಸಿದ ಕೂಡಲೇ ನೊಂದಾಯಿಸಿದ ಮೊಬೈಲ್‌ ಸಂಖ್ಯೆಗೆ ಸಂದೇಶ ಬರುತ್ತದೆ.

ವಾರ್ಷಿಕ ಪಾಸ್ ಕಡ್ಡಾಯವೇ?
ವಾರ್ಷಿಕ ಪಾಸ್ ಕಡ್ಡಾಯವಿಲ್ಲ. ಒಂದು ವೇಳೆ ವಾರ್ಷಿಕ ಪಾಸ್‌ ಪಡೆಯದವರು ಈಗ ಇರುವಂತೆ ಫಾಸ್ಟ್‌ಟ್ಯಾಗ್‌ ಬಳಸಿ ಟೋಲ್‌ ದಾಟಬಹುದು.