ಎರಡ್ಮೂರು ತಿಂಗಳಿನಲ್ಲಿ ಕೊಡಗಿನ ವ್ಯವಸ್ಥೆ ಸರಿಯಾಗುತ್ತೆ: ನ್ಯಾ.ವಿಶ್ವನಾಥ್ ಶೆಟ್ಟಿ

ಮಡಿಕೇರಿ: ಕೊಡಗು ಜಿಲ್ಲೆ ಮಹಾಮಳೆಗೆ ನಲುಗಿದ್ದು ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಇನ್ನೂ ಎರಡ್ಮೂರು ತಿಂಗಳಿನಲ್ಲಿ ಕೊಡಗಿನ ವ್ಯವಸ್ಥೆ ಸರಿಯಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.

ಮಡಿಕೇರಿಗೆ ಭೇಟಿ ನೀಡಿ ಮಾತನಾಡಿದ ಅವರು ನಾನು ಕೊಡಗಿಗೆ ಕೆಲಸವನ್ನು ವಿಮರ್ಶಿಸಲು ಬಂದಿಲ್ಲ. ಬದಲಾಗಿ ಜಿಲ್ಲಾಡಳಿತಕ್ಕೆ ನಮ್ಮ ಅನುಭವವನ್ನು ಹಂಚಿ ಯಾವ ರೀತಿ ಕೆಲಸ ಮಾಡಬಹುದು ಎಂಬ ಸಲಹೆ ನೀಡಲು ಬಂದಿದ್ದೇನೆ. ಸಮಸ್ಯೆ ಶೀಘ್ರವಾಗಿ ಪರಿಹಾರವಾಗಬೇಕು ಈ ನಿಟ್ಟಿನಲ್ಲಿ ನಾವು ಕೂಡ ಕೆಲಸ ಮಾಡುತ್ತಿದ್ದೇವೆ. ಕೊಡಗು ಪ್ರವಾಸೋದ್ಯಮವಾಗಿ ಬೆಳವಣಿಗೆ ಸಾಧಿಸಿದ್ದು, ಟೂರಿಸಂನನ್ನು ನಂಬಿಕೊಂಡು ಅನೇಕ ಕುಟುಂಬಗಳಿವೆ. ಹೀಗಾಗಿ ಜಿಲ್ಲೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸೋಶಿಯಲ್ ಮೀಡಿಯಾದ ಮೂಲಗಳಿಂದ ಜನರನ್ನು ಬೆದರಿಸುವ ಕೆಲಸವಾಗುತ್ತಿದೆ. ಅಂತವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಜನರು ಕೂಡ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಶೈಕ್ಷಣಿಕವಾಗಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ನೆರೆ ಜಿಲ್ಲೆಯ ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಸಹಾಯ ಪಡೆದುಕೊಳ್ಳಬೇಕು. ಮಾಧ್ಯಮದವರೂ ಕೂಡ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಲೋಕಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಮನವಿ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *