ನವವಿವಾಹಿತೆ ಮೇಲೆ ಪತಿ ಸೇರಿ 7 ಜನರಿಂದ ಗ್ಯಾಂಗ್‍ರೇಪ್!

ಚಂಡೀಗಢ: ನವವಿವಾಹಿತೆ ಮೇಲೆ ಆಕೆಯ ಪತಿ ಸೇರಿದಂತೆ 7 ಜನರು ಸಾಮೂಹಿಕ ಅತ್ಯಾಚಾರ ಎಸೆಗಿದ ಅಮಾನವೀಯ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಸಂತ್ರಸ್ತ ಮಹಿಳೆಯ ತಂದೆ ಸೆಪ್ಟೆಂಬರ್ 26ರಂದು ಕುರುಕ್ಷೇತ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ವರದಿಯಾಗಿದೆ.

ನಡೆದದ್ದು ಏನು?
ಸಂತ್ರಸ್ತ ಮಹಿಳೆ 22 ವರ್ಷದವರಾಗಿದ್ದು, ಸೆಪ್ಟೆಂಬರ್ 12ರಂದು ಮದುವೆ ಆಗಿತ್ತು. ಮದುವೆಯಾದ ಮಾರನೇ ದಿನ ಪತಿ ಹಾಗೂ ಆತನ ಕೆಲ ಸಂಬಂಧಿಕರು ಜ್ಯೂಸ್‍ನಲ್ಲಿ ನಶೆ ಔಷಧಿ ಹಾಕಿಕೊಟ್ಟಿದ್ದಾರೆ. ಜ್ಯೂಸ್ ಸೇವಿಸುತ್ತಿದ್ದಂತೆ ಪ್ರಜ್ಞೆ ತಪ್ಪಿದ ಆಕೆಯನ್ನು ಒಂದು ರೂಮ್‍ನಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಪತಿ, ಆತನ ಸಹೋದರ, ಸಹೋದರಿಯ ಪತಿ ಅತ್ಯಾಚಾರ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಸೆಪ್ಟೆಂಬರ್ 14ರಂದು ಪೂಜೆ ಮಾಡಲು ಬಂದಿದ್ದ ನಾಲ್ವರು ಪೂಜಾರಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸೆಗಿದ್ದಾರೆ. ಇದಕ್ಕೆ ಸಂತ್ರಸ್ತೆಯ ಪತಿಯ ತಾಯಿ, ತಂದೆ ಹಾಗೂ ಸಹೋದರಿ ಸಹಕಾರ ನೀಡಿದ್ದಾರೆ. ಅತ್ಯಾಚಾರದ ಬಳಿಕ ಮಹಿಳೆಯನ್ನು ಕೊಲೆ ಮಾಡಲು ಅವರು ಪ್ರಯತ್ನಿಸಿದ್ದರು ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕುರುಕ್ಷೇತ್ರ ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಶೀಲವಂತಿ, ಸಂತ್ರಸ್ತೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *