ಮಂತ್ರಿ ಸ್ಥಾನಕ್ಕಾಗಿ ತಂತ್ರ ಬದಲಿಸಿದ ‘ಮಿತ್ರ ಮಂಡಳಿ’-ಯಡಿಯೂರಪ್ಪಗೆ ಮತ್ತಷ್ಟು ಇಕ್ಕಟ್ಟು

ಬೆಂಗಳೂರು: ಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯ ನೂತನ ಶಾಸಕರ ಮಿತ್ರ ಮಂಡಳಿ ದಿಢೀರ್ ಅಂತಾ ತನ್ನ ತಂತ್ರಗಾರಿಕೆಯನ್ನು ಬದಲಿಸಿದ್ದರಿಂದ ಸಿಎಂ ಯಡಿಯೂರಪ್ಪ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಬಿಕ್ಕಟ್ಟು ದಿನದಿಂದ ದಿನಕ್ಕೆ ಜಟಿಲವಾಗುತ್ತಾ ಹೋಗುತ್ತಿದೆ. ವಿದೇಶ ಪ್ರವಾಸದಿಂದ ಬಂದ ಸಿಎಂ, ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸುಳಿವು ನೀಡಿದ ಬೆನ್ನಲ್ಲೇ ಮಿತ್ರಮಂಡಳಿಯಲ್ಲಿ ಅಸಮಾಧಾನದ ಹೊಗೆ ಕಾಣುತ್ತಿದೆ. ಇತ್ತ ಸೋತ ಹೆಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ಎಂಬ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಸೋತವರು ಸೇರಿದಂತೆ ಆರ್.ಶಂಕರ್ ಸಹ ತಮ್ಮ ಮಿತ್ರಮಂಡಳಿಯ ಸದಸ್ಯರ ಮೇಲೆ ಕಿಡಿಕಾರಿದ್ದರಂತೆ. ಈ ಹಿನ್ನೆಲೆಯಲ್ಲಿ ಗೆದ್ದ ಶಾಸಕರು ಸೋತವರಿಗಾಗಿ ತಮ್ಮ ತಂತ್ರವನ್ನು ಬದಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಗೆದ್ದವರಿಗೆ ಸೋತವರ ಗುದ್ದು!

ಬದಲಾದ ತಂತ್ರವೇನು?
ಮೊದಲು ಸೋತವರಿಗೆ ಸಚಿವ ಸ್ಥಾನ ನೀಡಬೇಕು. ಅವರನ್ನು ಬಿಟ್ಟು ಸಚಿವರಾದರೆ ತಪ್ಪಾಗುತ್ತದೆ. ಇದರ ಜೊತೆಗೆ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ವಿಷಯದಲ್ಲಿ ರಾಜಿಯಾಗುವ ಮಾತಿಲ್ಲ. ಒಟ್ಟಿಗೆ ರಾಜೀನಾಮೆ ನೀಡಿದ್ದು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಸಿಎಂಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ‘ಮಿತ್ರ’ರ ಹೊಸ ಆಟ, ಬಿಎಸ್‍ವೈಗೆ ಸಂಕಟ!

ಇಂದು ಬೆಳಗ್ಗೆ 11 ಮಂದಿ ಗೆದ್ದ ಶಾಸಕರು ಸೇರಿದಂತೆ ಎಲ್ಲ 15 ಜನರು ಸಭೆ ನಡೆಸಿ ಈ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ನಾಳೆ ಅಥವಾ ಸೋಮವಾರ ಮತ್ತೊಮ್ಮೆ ಸಭೆ ನಡೆಸಿ, ಮತ್ತೊಮ್ಮೆ ಯಡಿಯೂರಪ್ಪರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಮುಂದಿರಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೇರೆಯವ್ರ ವಿಷ್ಯ ನಂಗೊತ್ತಿಲ್ಲ, ನನ್ನ ಮಾತ್ರ ಮಿನಿಸ್ಟರ್ ಮಾಡಿ: ಶಂಕರ್

Comments

Leave a Reply

Your email address will not be published. Required fields are marked *