13 ರನ್‍ಗಳಿಗೆ 3 ವಿಕೆಟ್ ಪತನ – ಭಾರತಕ್ಕೆ 7 ವಿಕೆಟ್‍ಗಳ ಭರ್ಜರಿ ಜಯ

ಆಕ್ಲೆಂಡ್: ಶಿಸ್ತುಬದ್ಧವಾದ ಬೌಲಿಂಗ್ ಮತ್ತು ಬ್ಯಾಟಿಂಗ್ ನಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಭಾರತ 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 133 ರನ್ ಗಳ ಸುಲಭದ ಗುರಿಯನ್ನು ಬೆನ್ನಟ್ಟಿದ ಭಾರತ 17.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇಗನೇ ಔಟಾದರೂ ರಾಹುಲ್ ಅರ್ಧಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಉತ್ತಮ ಆಟದಿಂದಾಗಿ ಭಾರತ ಭರ್ಜರಿ ಜಯಗಳಿಸಿ ಸರಣಿ ಜಯದತ್ತ ಮುನ್ನುಗುತ್ತಿದೆ.

ರೋಹಿತ್ ಶರ್ಮಾ 8 ರನ್, ನಾಯಕ ವಿರಾಟ್ ಕೊಹ್ಲಿ 11 ರನ್ ಗಳಿಸಿ ಔಟಾದಾಗ ತಂಡದ ಮೊತ್ತ 39 ರನ್ ಆಗಿತ್ತು. ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದಾದ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮೂರನೇ ವಿಕೆಟಿಗೆ 67 ಎಸೆತದಲ್ಲಿ 86 ರನ್ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು.

44 ರನ್(33 ಎಸೆತ, 1 ಬೌಂಡರಿ, 3 ಸಿಕ್ಸರ್) ಗಳೊಂದಿಗೆ ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ ಸಿಕ್ಸ್ ಹೊಡೆಯಲು ಹೋಗಿ ಕ್ಯಾಚ್ ನೀಡಿ ಔಟಾದರು. ನಂತರ ಬಂದ ದುಬೆ ಸಿಕ್ಸರ್ ಹೊಡೆದು ಪಂದ್ಯವನ್ನು ಪೂರ್ಣಗೊಳಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಾಹುಲ್ ಔಟಾಗದೇ 57 ರನ್(50 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದರೆ ಶಿವಂ ದುಬೆ ಔಟಾಗದೇ 8 ರನ್ ಹೊಡೆದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪರವಾಗಿ ಗಪ್ಟಿಲ್ 33 ರನ್(20 ಎಸೆತ, 4 ಬೌಂಡರಿ, 2 ಸಿಕ್ಸ್), ಕಾಲಿನ್ ಮನ್ರೋ 26 ರನ್(25 ಎಸೆತ, 2 ಬೌಂಡರಿ, 1 ಸಿಕ್ಸ್) ಟಿಮ್ ಸೀಫರ್ಟ್ ಔಟಾಗದೇ 33 ರನ್(26 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರು. ಭಾರತದ ಪರ ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್, ಬುಮ್ರಾ, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

ಪಂದ್ಯದ ತಿರುವು: 8.3 ಓವರ್ ಆದಾಗ 1 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್ 13 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಮನ್ರೋ ಕ್ಯಾಚ್ ನೀಡಿ ಔಟಾದರೆ, ಕೇನ್ ವಿಲಿಯಮ್ಸನ್ ಮತ್ತು ಗ್ರ್ಯಾಂಡ್‍ಹೋಮ್ ಜಡೇಜಾಗೆ ವಿಕೆಟ್ ಒಪ್ಪಿಸಿದ್ದರಿಂದ ನ್ಯೂಜಿಲೆಂಡ್‍ಗೆ ಹಿನ್ನಡೆ ಆಯಿತು. ಜಡೇಜಾ 4 ಓವರ್ ಎಸೆದು 18 ರನ್ ನೀಡಿದರೆ ಬುಮ್ರಾ 21 ರನ್ ನೀಡಿ 1 ವಿಕೆಟ್ ಕಿತ್ತರು. ಶಮಿ 22 ರನ್ ನೀಡಿ ನ್ಯೂಜಿಲೆಂಡಿನ ರನ್ ಓಟಕ್ಕೆ ಕಡಿವಾಣ ಹಾಕಿದರು.

ಮೊದಲ ಟಿ20 ಪಂದ್ಯವನ್ನು 6 ವಿಕೆಟ್‍ಗಳಿಂದ ಭಾರತ ಜಯಗಳಿಸಿತ್ತು. ಮೂರನೇ ಪಂದ್ಯ ಜನವರಿ 29 ರಂದು ಹ್ಯಾಮಿಲ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Comments

Leave a Reply

Your email address will not be published. Required fields are marked *